ಬೆಂಗಳೂರು : ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಪೋನ್ ಮಾತುಕತೆ ಸತ್ಯಕ್ಕೆ ದೂರವಾದದ್ದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಹೆಚ್.ಡಿ ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರೆ ಮಾಡಿ ಅಭಯ ನೀಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ. ದೇವೇಗೌಡರ ಜೊತೆ ಫೋನ್ ಮಾತುಕತೆ ನಡೆಸಿದ್ದಾರೆ ಎಂಬ ವಿಚಾರ ಸತ್ಯಕ್ಕೆ ದೂರವಾದದ್ದು, ಮಾಜಿ ಪ್ರಧಾನಿಯಾಗಿ ದೇವೇಗೌಡ ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನ ಮಾಡುವ ಶಕ್ತಿ ಇದೆ. ನಾನು ದೇವೇಗೌಡರ ಹೆಸರನ್ನು ಯಾವುದೇ ಸಂದರ್ಭದಲ್ಲೂ ಪ್ರಸ್ತಾಪ ಮಾಡಿಲ್ಲ. ಕೆಲವು ಮಾಧ್ಯಮಗಳಲ್ಲಿ ಹೆಚ್.ಡಿ. ದೇವೇಗೌಡ ಅವರು ಕರೆ ಮಾಡಿ ಅಭಯ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದರು.










