ಚಿಕ್ಕಮಗಳೂರು : ರಾಷ್ಟೀಯ ಮೀನುಗಾರರ ಸ್ವಾಭಿಮಾನಿ ವಿಕಾಸ ಸಮಾವೇಶ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಡಿ.14 ರಂದು ನಡೆಯಲಿದೆ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಜ್ಯಾಧ್ಯಕ್ಷ ಡಾ|| ದೇವಿಪ್ರಸಾದ್ ಹೇಳಿದರು.
ನಗರದ ಜಿಲ್ಲಾ ಗಂಗಾಮತಸ್ಥರ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾವೇಶದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಮೀನುಗಾರರ ಜನಾಂಗವನ್ನು ಒಂದೆಡೆ ಸೇರಿಸಿ ಅವರ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅಮಿತ್ ಷಾ ಸೇರಿದಂತೆ ರಾಷ್ಟೀಯ ಮತ್ತು ರಾಜ್ಯದ ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ರಾಷ್ಟೀಯ ಮೀನುಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಡಿ.ರವಿಕುಮಾರ್ ಮಾತನಾಡಿ ಮೀನುಗಾರರು ಮತ್ತು ಬೆಸ್ತರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಆ ಜನಾಂಗಗಳಿಗೆ ಮೀನು ಹಿಡಿಯುವ ಹಕ್ಕನ್ನು ನೀಡುವುದು, ಜನಾಂಗದ ಜನಪ್ರತಿನಿಧಿಗಳಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡುವುದು, ಅಂಬಿಗರ ಚೌಡಯ್ಯ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸುವುದು, ಸಮಾಜದ ವಿದ್ಯಾರ್ಥಿನಿಲಯ, ದೇವಾಲಯಗಳ ಜೀಣೋದ್ದಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಗಂಗಾ ಮತಸ್ಥರ ಸಂಘದ ಅಧ್ಯಕ್ಷ ಕೆ.ಎಂ.ಧನಂಜಯ ಮೀನುಗಾರರ ಜನಾಂಗದ ಜನ ತಮ್ಮ ಹಕ್ಕನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ರಾಷ್ಟೀಯ ಮೀನುಗಾರರ ಸಂಘದ ನೂತನ ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೆ.ರಾಮಣ್ಣ, ಮಾಜಿ ಅಧ್ಯಕ್ಷ ಡಿ.ಎಲ್.ಶಂಕರನಾಥ್, ಜಿಲ್ಲಾ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷ ಜಿ.ಪುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಟಿ.ಅಶೋಕ್, ತಾಲ್ಲೂಕು ಅಧ್ಯಕ್ಷ ಎ.ಟಿ.ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ಗೋಪಾಲ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಡಿ.14 ರಂದು ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ರಾಷ್ಟೀಯ ಮೀನುಗಾರರ ಸ್ವಾಭಿಮಾನಿ ವಿಕಾಸ ಸಮಾವೇಶ…










