ದಾವಣಗೆರೆ : ಮಹಿಳೆಯೋರ್ವರ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ನಗರದಲ್ಲಿ ನಡೆದಿದೆ.
ಕಳೆದ ಶನಿವಾರ ನಗರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಂದ್ರಮ್ಮ ಬಿ.ಎಂ (57) ಎಂಬುವರು ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದ್ರಮ್ಮ ಅವರನ್ನು ರಕ್ಷಿಸಲು ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆಕೆಯ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದರು. ಈ ಹಿನ್ನೆಲೆ ಕುಟುಂಬಸ್ಥರು ಆಕೆಯ ಅಂಗಾಗಗಳನ್ನು ದಾನ ಮಾಡಲು ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಯ್ದೆ ಹಾಗೂ ನಿಯಮಗಳ ಅನುಸಾರ ಮಹಿಳೆಯ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಇಂದ್ರಮ್ಮ ಅವರ ಹೃದಯ/ಹೃದಯ ಕವಾಟಗಳು, ಯಕೃತ್ತು, ಎರಡು ಮೂತ್ರಪಿಂಡಗಳು ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆಯಲು ನಿರ್ಧರಿಸಲಾಗಿದೆ. ಇದರಿಂದ ಒಟ್ಟು ಆರು ಮಂದಿಯ ಜೀವ ಉಳಿಸಲು ಸಹಾಯವಾಗಿದೆ. ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡವನ್ನು ಮಣಿಪಾಲ ಕಸ್ತೂರಬಾ ಆಸ್ಪತ್ರೆಯ ರೋಗಿಗಳಿಗೆ ಬಳಸಲಾಯಿತು. ಒಂದು ಮೂತ್ರಪಿಂಡವನ್ನು ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ, ಹೃದಯ/ಹೃದಯ ಕವಾಟವನ್ನು ಚೆನ್ನೈನ ಎಂ.ಜಿ.ಎಂ ಆಸ್ಪತ್ರೆಯ ರೋಗಿಗಳಿಗೆ ಕಳುಹಿಸಿಕೊಡಲಾಗಿದೆ. ಅಂಗಾಂಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚೆನ್ನೈಗೆ ಕಳುಹಿಸಲಾಯಿತು.










