ಮಂಗಳೂರು: ಕೇರಳ ರಾಜ್ಯಕ್ಕೆ ಸಾಗಾಟ ಮಾಡಲು ಕೇರಳಗಡಿ ಭಾಗ ಕಿನ್ಯಾ ಗ್ರಾಮದ ಸಾಂತ್ಯ ಬಳಿ ಸ್ಪಿರಿಟ್ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ 25ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ತಲಪಾಡಿ ನಿವಾಸಿ ಸತೀಶ್, ಕುಂಜತ್ತೂರು ನಿವಾಸಿಗಳಾದ ನೌಷಾದ್, ಅನ್ಸೀಫ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇಲಾಖೆ ಮಂಗಳೂರು ವಿಭಾಗದ ಜಂಟಿ ನಿರ್ದೇಶಕ ನಾಗರಾಜಪ್ಪ ಟಿ ಮತ್ತು ಅಬಕಾರಿ ಉಪ ಆಯುಕ್ತ ಟಿ.ಎಂ ಶ್ರೀನಿವಾಸ್ ಅವರ ನಿರ್ದೇಶನದಂತೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ 2240 ಲೀಟರ್ ಸ್ಪಿರಿಟ್ ಹಾಗೂ 222 ಲೀಟರ್ ನಕಲಿ ಲಿಕ್ಕರ್ ಹಾಗೂ ಅದಕ್ಕೆ ಬಳಸಿದ್ದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ತಯಾರಿಸಿದ ದೇಶಿ ನಿರ್ಮಿತ ಮದ್ಯವನ್ನು ನೆರೆಯ ಕೇರಳಕ್ಕೆ ಸರಬರಾಜು ಮಾಡಲಾಗುತ್ತಿತ್ತು. ದಾಳಿ ವೇಳೆ ಮೂವರನ್ನು ವಶಕ್ಕೆ ಪಡೆದಿದ್ದು, ಓರ್ವ ಆರೋಪಿ ನಿತ್ಯಾನಂದ ಭಂಡಾರಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.










