ಅಕ್ರಮ ವಿದ್ಯುತ್ ಸಂಪರ್ಕ: ಬೆಸ್ಕಾಂಗೆ ದಂಡ ಕಟ್ಟಿದ ಹೆಚ್​ಡಿ ಕುಮಾರಸ್ವಾಮಿ.

41
firstsuddi

ಬೆಂಗಳೂರು: ದೀಪಾವಳಿ ಪ್ರಯುಕ್ತ ತಮ್ಮ ನಿವಾಸ ದೀಪಾಲಂಕಾರಕ್ಕೆ ಬೀದಿ ದೀಪದ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಬೆಸ್ಕಾಂಗೆ ದಂಡ ಪಾವತಿಸಿದ್ದಾರೆ.

ಬೆಸ್ಕಾಂ ವಿಧಿಸಿದ 68,526 ರೂ.ದಂಡದ ಮೊತ್ತವನ್ನು ಕುಮಾರಸ್ವಾಮಿ ಅವರು ಆನ್​ಲೈನ್ ಮೂಲಕ ಪಾವತಿಸಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಬೆಸ್ಕಾಂ 2.5 ಕಿಲೋ ವ್ಯಾಟ್​​​ಗೆ ಲೆಕ್ಕ ತೆಗೆದುಕೊಂಡಿದೆ. 7 ದಿನಕ್ಕೆ 71 ಯೂನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. ಬೆಸ್ಕಾಂ ಪ್ರಕಾರ, 2,526 ರೂ. ಬಿಲ್ ಬರಬೇಕಿತ್ತು. ಆದರೆ, 68,526 ರೂ. ಕರೆಂಟ್ ಬಿಲ್ ನೀಡಿದೆ. ಹೀಗಾಗಿ ಕರೆಂಟ್ ಬಿಲ್ ಬಗ್ಗೆ ಪುನರ್ ಪರಿಶೀಲನೆ ಮಾಡಲು ಹೇಳಿದ್ದಾಗಿ ತಿಳಿಸಿದರು.

ಹೆಚ್​ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ದೀಪಾವಳಿ ದೀಪಾಲಂಕಾರಕ್ಕಾಗಿ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ನೇರವಾಗಿ ವಿದ್ಯುತ್ ಪಡೆದಿರುವ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಇದರ ಬೆನ್ನಲ್ಲೇ, ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಕುಮಾರಸ್ವಾಮಿ ಮನೆಗೆ ತೆರಳಿ ಪರಿಶೀಲನೆ ಮಾಡಿ ಎಫ್ಐಆರ್ ದಾಖಲಿಸಿದ್ದರು. ಬಳಿಕ ದಂಡ ವಿಧಿಸಿದ್ದರು.