ನವದೆಹಲಿ: ಜಾರಿ ನಿರ್ದೇಶನಾಲಯವು ಗಾಜಿಯಾಬಾದ್ ನ್ಯಾಯಾಲಯದಲ್ಲಿ ತನ್ನ ವಿರುದ್ಧ ನಡೆಸುತ್ತಿರುವ ಪ್ರಕರಣವನ್ನು ಪ್ರಶ್ನಿಸಿ ಪತ್ರಕರ್ತೆ ರಾಣಾ ಅಯ್ಯುಬ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಅಯ್ಯುಬ್ ಅವರು ಮುಂಬೈನಲ್ಲಿ ಅಕ್ರಮ ಹಣ ವರ್ಗಾವಣೆಯ ಅಪರಾಧ ನಡೆದಿರುವುದರಿಂದ ಗಾಜಿಯಾಬಾದ್ ನ್ಯಾಯವ್ಯಾಪ್ತಿಯಲ್ಲಿ ವಿಚಾರಣೆಗೆ ಬರುವುದಿಲ್ಲ. ಹೀಗಾಗಿ ವಿಚಾರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾ. ವಿ ರಾಮ ಸುಬ್ರಮಣಿಯನ್ ಮತ್ತು ಜೆಬಿ ಪರ್ದಿವಾಲಾ ಅವರ ದ್ವಿಸದಸ್ಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿದೆ.
ಕಳೆದ ವರ್ಷ ನವೆಂಬರ್ 29 ರಂದು, ಗಾಜಿಯಾಬಾದ್ ನ ವಿಶೇಷ ಪಿಎಂಎಲ್ಎ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ರಾಣಾ ಅಯ್ಯುಬ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಅಯ್ಯುಬ್ ಸುಪ್ರೀಂ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.
ಏನಿದು ಪ್ರಕರಣ?
ಕೋವಿಡ್ ಪರಿಹಾರಕ್ಕಾಗಿ 2.69 ಕೋಟಿ ರೂ. ಹಣವನ್ನು ಸಂಗ್ರಹಿಸಿ ಅದನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪತ್ರಕರ್ತೆ ರಾಣಾ ಅಯ್ಯುಬ್ ವಿರುದ್ಧ ಗಾಜೀಯಾಬಾದ್ ನಲ್ಲಿರುವ ಪಿಎಂಎಲ್ ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಪರಿಹಾರ ಕಾರ್ಯಕ್ಕೆ ಕೇವಲ 29 ಲಕ್ಷ ರೂಪಾಯಿ ಬಳಸಲಾಗಿದೆ. ಅಷ್ಟೇ ಅಲ್ಲದೇ ಪರಿಹಾರ ಕೆಲಸಕ್ಕೆ ಹೆಚ್ಚಿನ ವೆಚ್ಚ ಪಡೆಯಲು ಅಯ್ಯುಬ್ ನಕಲಿ ಬಿಲ್ ಸಲ್ಲಿಸಿದ್ದಾರೆ. ಜನರಿಂದ ಹಣವನ್ನು ಸಂಗ್ರಹಿಸಿ ವಂಚನೆ ಮಾಡಲೆಂದೇ ರಾಣಾ ಅಯ್ಯುಬ್ ದೇಣಿಗೆ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದರು ಎಂದು ಇಡಿ ಆರೋಪಿಸಿದೆ.
ಆನ್ ಲೈನ್ ಕ್ರೌಡ್ ಫಂಡಿಂಗ್ ಪ್ಲಾಟ್ ಫಾರ್ಮ್-‘ಕೆಟ್ಟೋ’ದಲ್ಲಿ ಏಪ್ರಿಲ್ 2020 ರಿಂದ ನಿಧಿ ಸಂಗ್ರಹ ಅಭಿಯಾನವನ್ನು ಅಯ್ಯುಬ್ ಪ್ರಾರಂಭಿಸಿದ್ದರು. ಕೊಳೆಗೇರಿ ನಿವಾಸಿಗಳು ಮತ್ತು ರೈತರಿಗೆ ಸಹಾಯ, ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಪರಿಹಾರ ಕಾರ್ಯ, ಭಾರತದಲ್ಲಿ ಕೋವಿಡ್ 19 ನಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಅಯ್ಯುಬ್ ನಿಧಿ ಸಂಗ್ರಹ ಮಾಡಿದ್ದರು.










