ನವದೆಹಲಿ : ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್(ಎಐಎಫ್ ಎಫ್) ಮೇಲಿನ ನಿರ್ಬಂಧವನ್ನು ಫಿಫಾ ತೆರವುಗೊಳಿಸಿದೆ.
ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ನಡೆಯುತ್ತಿದೆ ಎಂದು ಹೇಳಿ ಆ.15 ರಂದು ಭಾರತೀಯ ಫುಟ್ಬಾಲ್ ಸಂಸ್ಥೆಯನ್ನು ಫಿಫಾ ನಿಷೇಧಿಸಿತ್ತು. ಇದೀಗ ಎಐಎಫ್ ಎಫ್ ಮೇಲೆ ವಿಧಿಸಲಾಗಿದ್ದ ಅಮಾನತನ್ನು ತೆಗೆದುಹಾಕಲು ನಿರ್ಧರಿಸಿರುವುದಾಗಿ ಫಿಫಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಎಐಎಫ್ಎಫ್ ಆಡಳಿಗಾರರ ಸಮಿತಿಯನ್ನು(ಸಿಒಎ) ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಸುಪ್ರೀಂ ಆದೇಶ ಪ್ರಕಟವಾದ ಬೆನ್ನಲ್ಲೇ ಎಐಎಫ್ ಎಫ್ ತನ್ನ ಮೇಲೆ ವಿಧಿಸಲಾಗಿರುವ ಅಮಾನತನ್ನು ತೆರವುಗೊಳಿಸಬೇಕೆಂದು ಫಿಫಾ ಬಳಿ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಫಿಫಾ ನಿಷೇಧ ವಾಪಸ್ ಪಡೆದಿದೆ. ಇನ್ನು ಫಿಫಾದ ನಿರ್ಧಾರವನ್ನು ಭಾರತದ ಫುಟ್ಬಾಲ್ ಸಂಸ್ಥೆ ಸ್ವಾಗತಿಸಿದೆ.
ಈ ಬಾರಿ ಅಕ್ಟೋಬರ್ ನಲ್ಲಿ ಭಾರತದಲ್ಲಿ ನಡೆಯಬೇಕಿದ್ದ 17 ವರ್ಷದ ಒಳಗಿನ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಮೊದಲೇ ನಿರ್ಧರಿಸಿದಂತೆ ನಡೆಯಲಿದೆ ಎಂದು ಫಿಫಾ ಹೇಳಿದೆ.










