ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ…

61
firstsuddi

ಬೆಳಗಾವಿ : ಅಗ್ನಿಪಥ್ ಯೋಜನೆ ವಿರೋಧಿಸಿ ಜಿಲ್ಲೆಯಾದ್ಯಂತ ಸೇನಾ ಆಕಾಂಕ್ಷಿ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ಯುವಕರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಜಿಲ್ಲೆಯ ಗೋಕಾಕ್ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಯುವಕರು ಅಗ್ನಿಪಥ್ ಯೋಜನೆ ಯುವ ಸಮೂಹಕ್ಕೆ ಮಾರಕವಾಗಿದೆ. ಕೋಟ್ಯಂತರ ಯುವಕರ ಭವಿಷ್ಯದ ಜೊತೆಗೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಕಿಡಿಕಾರಿದರು.

ಯಾವುದೇ ಕಾರಣಕ್ಕೂ ಅಗ್ನಿಪಥ್ ಯೋಜನೆ ಜಾರಿಗೆ ತರಬಾರದು ಎಂದು ಸೇನಾ ಆಸಕ್ತ ಯುವಕರು ಒತ್ತಾಯಿಸಿದ್ದು, ಒಂದು ವೇಳೆ, ಅಗ್ನಿಪಥ್ ಯೋಜನೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆಯನ್ನು ಸಹ ನೀಡಿದರು.

ಇನ್ನು ಜಿಲ್ಲೆಯ ಖಾನಾಪುರ ಪಟ್ಟಣ ಮಲಪ್ರಭಾ ಮೈದಾನದಲ್ಲಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಸೇನಾ ಆಕಾಂಕ್ಷಿ ಯುವಕರು ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಮಲಪ್ರಭಾ ಕ್ರೀಡಾಂಗಣದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸೇನಾ ನೇಮಕಾತಿ ಹೊಸ ನಿಯಮ ಅಗ್ನಿಪಥ ಕೈಬಿಡುವಂತೆ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.