ಹಾವೇರಿ : ಬೆಳೆದು ನಿಂತಿದ್ದ ಅಡಿಕೆ ಗಿಡಗಳನ್ನ ಕಿಡಿಗೇಡಿಗಳು ಕಡಿದು ಹಾಕಿದ್ದು, ಕಿಡಿಗೇಡಿಗಳ ಕೃತ್ಯದಿಂದ ತೀವ್ರವಾಗಿ ಮನನೊಂದ ರೈತ ಜಮೀನಿನಲ್ಲಿ ಬಿದ್ದು ಹೊರಳಾಡಿ ಕಣ್ಣೀರು ಹಾಕಿದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ.
ರೈತ ಅಡಿವೆಪ್ಪಾ ಆಲದಮಟ್ಟಿ ಎಂಬುವವರು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಡಿಕೆ ಗಿಡಗಳನ್ನ ಬೆಳೆಸಿದ್ದರು. ಆದರೆ ರಾತ್ರಿ ವೇಳೆಯಲ್ಲಿ ತೋಟಕ್ಕೆ ನುಗ್ಗಿ 52 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದಾರೆ.
ತುಂಡಾಗಿ ಬಿದ್ದಿರೋ ಅಡಿಕೆ ಗಿಡಗಳನ್ನು ತಬ್ಬಿಕೊಂಡು, ಜಮೀನಿನಲ್ಲಿ ರೈತ ಉರುಳಾಡಿ ಕಣ್ಣೀರು ಹಾಕಿದ್ದಾರೆ. ಈ ಕೃತ್ಯವನ್ನ ಎಸಗಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.