ಮುದ್ದೇಬಿಹಾಳ : ಅನುಮಾನಾಸ್ಪದ ರೀತಿಯಲ್ಲಿ ಉಪನ್ಯಾಸಕರೊಬ್ಬರ ಶವ ತಾಲೂಕಿನ ಮಲಗಲದಿನ್ನಿ ಗ್ರಾಮದ ರಸ್ತೆ ಬದಿ ಪತ್ತೆಯಾಗಿದೆ.
ತಾಳಿಕೋಟಿ ನಿವಾಸಿ ಕಾಶೀನಾಥ ಶರಬಯ್ಯ ಪುರಾಣಿಕಮಠ (27) ಸಾವನ್ನಪ್ಪಿದ ಉಪನ್ಯಾಸಕ. ನಾಗರಬೆಟ್ಟದ ಎಕ್ಸ್ಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇವರು ನಿತ್ಯ ತಾಳಿಕೋಟಿಗೆ ಹೋಗಿ ಬರುತ್ತಿದ್ದರು. ನಿನ್ನೆ ರಾತ್ರಿ 8.20ಕ್ಕೆ ಕಾಲೇಜಿನಿಂದ ಊರಿನ ಕಡೆಗೆ ಬೈಕ್ ನಲ್ಲಿ ತೆರಳಿದ್ದಾರೆ. ಆದರೆ ಊರಿಗೆ ಬಾರದೇ ಇರುವುದರಿಂದ ಕುಟುಂಬಸ್ಥರು ಕಾಲೇಜಿನವರನ್ನು ವಿಚಾರಿಸಿದಾಗ ಅವರು ಊರಿಗೆ ತೆರಳಿದ್ದಾರೆ ಎಂದು ಕಾಲೇಜಿನವರು ಉತ್ತರಿಸಿದ್ದಾರೆ.
ಇಂದು ಬೆಳಗ್ಗೆ ರಸ್ತೆ ಬದಿ ಒಂದೆಡೆ ಬೈಕ್, ಮತ್ತೊಂದೆಡೆ ಉಪನ್ಯಾಸಕನ ಶವ ಬಿದ್ದಿರುವುದು ಕಂಡುಬಂದಿದೆ. ಮೃತನ ಕುಟುಂಬಸ್ಥರು ಇದು ಅಪಘಾತವಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಮುದ್ದೇಬಿಹಾಳ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










