ಚಿಕ್ಕಬಳ್ಳಾಪುರ: ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ತಂಗಿ ಅಡ್ಡ ಬರುತ್ತಾಳೆಂದು ಆಕೆಯ ಆರು ವರ್ಷದ ಮಗನನ್ನು ಕೊಲೆ ಮಾಡಿ ಹೂತಿಟ್ಟ ಘಟನೆಯೊಂದು ಜಿಲ್ಲೆಯ ಪೇರೇಸಂದ್ರ ಬಳಿಯ ಮುತ್ತಕದ ಹಳ್ಳಿಯಲ್ಲಿ ನಡೆದಿದೆ.
ಮಗುವನ್ನು ಕೊಲೆಗೈದ ಆರೋಪಿಯನ್ನು ಅಂಬಿಕಾ ಎಂದು ಗುರುತಿಸಲಾಗಿದೆ. ಆಕೆ ತನ್ನ ತಂಗಿ ಅನಿತಾಳ ಮಗ ಮಧು(6) ನನ್ನು ಕೊಲೆ ಮಾಡಿ ಹೂತು ಹಾಕಿದ್ದಾಳೆ.
ಅಂಬಿಕಾ ಹಾಗೂ ಅನಿತಾ ಅಕ್ಕ ತಂಗಿಯರು. ಆದರೆ ಅಂಬಿಕಾ ಅನೈತಿಕ ಸಂಬಂಧ ಹೊಂದಿದ್ದ ವಿಚಾರ ಅನಿತಾಗೆ ತಿಳಿದಿತ್ತು. ಅದರಂತೆ ವಿರೋಧವೂ ವ್ಯಕ್ತಪಡಿಸಿದ್ದಳು. ಇದರಿಂದ ಕೋಪಗೊಂಡ ಅಂಬಿಕಾ, ಅನಿತಾಳ ಮಗ ಮಧುನನ್ನು ಗುಡಿಬಂಡೆ ಮಾರ್ಗದಲ್ಲಿರುವ ಎಂಎಲ್‍ಸಿ ಮುನಿರಾಜು ಅವರ ಸಹೋದರರಿಗೆ ಸೇರಿದೆ ಎನ್ನಲಾದ ಮಾವಿನ ತೋಟದಲ್ಲಿ ಗುದ್ದಲಿಯಿಂದ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಅಲ್ಲದೇ ಅಲ್ಲಿಯೇ ಮಣ್ಣಲ್ಲಿ ಹೂತು ಹಾಕಿದ್ದಾಳೆ. ಇದಾದ ನಂತರ ಅನಿತಾಳ ಮಗಳನ್ನು ಕರೆದುಕೊಂಡು ಬೆಂಗಳೂರಿನ ಯಲಹಂಕಗೆ ತೆರಳಿದ್ದಾಳೆ. ಅಲ್ಲಿ ಅಕೆಯನ್ನು ಮಾರಾಟ ಮಾಡಲು ಮುಂದಾಗಿದ್ದಳು ಎಂದು ತಿಳಿದುಬಂದಿದೆ.
ಅಂಬಿಕಾಳ ನಡವಳಿಕೆಯಿಂದ ಆಟೋ ಚಾಲಕನೊಬ್ಬ ಅನುಮಾನಗೊಂಡು ಆಕೆಯನ್ನು ಹಾಗೂ ಹೆಣ್ಣು ಮಗುವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಮೃತದೇಹವನ್ನು ಮಣ್ಣಿನಿಂದ ಹೊರತೆಗೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.










