ಬೆಂಗಳೂರು: ನಗರದ ನೈಸ್ ರಸ್ತೆಯ ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ಕ್ಯಾಂಟರ್ ವಾಹನವೊಂದು ಹಿಂದಿನಿಂದ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯನಗರದ ಹೊಸಹಳ್ಳಿ ನಿವಾಸಿಗಳಾದ ಬೈಯಣ್ಣ ಮತ್ತು ನಿರ್ಮಲ ಮೃತರು. ನಿನ್ನೆ ಹಾರಗದ್ದೆಯಲ್ಲಿ ಸಂಬಂಧಿಕರೊಬ್ಬರ ಗೃಹ ಪ್ರವೇಶ ಮುಗಿಸಿ ಹಿಂತಿರುಗುವಾಗ ಮೂರು ಗಂಟೆ ಸುಮಾರಿಗೆ ನೈಸ್ ರಸ್ತೆಯ ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ಇವರ ಬೈಕ್‌ಗೆ ಹಿಂದಿನಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಅತಿವೇಗವಾಗಿ ಕ್ಯಾಂಟರ್ ಚಲಾಯಿಸಿಕೊಂಡು ಬಂದ ಚಾಲಕ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಬೈಯಣ್ಣ ದಂಪತಿ ಹಾರಿ ನೆಲಕ್ಕೆ ಬಿದ್ದಿದ್ದಾರೆ. ಬೈಯಣ್ಣಗೆ ತಲೆಗೆ ಪೆಟ್ಟು ಬಿದ್ದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪತ್ನಿಯೂ ಕೂಡ ಬೋರಲಾಗಿ ಬಿದ್ದು ಕೊನೆಯುಸಿರೆಳೆದಿದ್ದಾರೆ. ಘಟನೆಯ ಬಳಿಕ ಕ್ಯಾಂಟರ್ ಚಾಲಕ, ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದಾನೆ.
ಬೈಯಣ್ಣ ಮತ್ತು ನಿರ್ಮಲ ದಂಪತಿಗೆ ಇಬ್ಬರು ಮಕ್ಕಳಿದ್ದು, (ಒಂದು ಗಂಡು, ಒಂದು ಹೆಣ್ಣು). ಇಬ್ಬರೂ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಈ ಹಿಂದೆ ಕೂಡ ಎರಡು ಬಾರಿ ಅಪಘಾತಕ್ಕೊಳಗಾಗಿದ್ದ ಬೈಯ್ಯಣ್ಣ ಎರಡು ಬಾರಿಯೂ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದರು. ಇದೀಗ ಸಂಭವಿಸಿದ ಮೂರನೇ ಅಪಘಾತದಲ್ಲಿ ಬೈಯಣ್ಣ ಮತ್ತು ಪತ್ನಿ ಇಬ್ಬರೂ ಸಾವನ್ನಪ್ಪಿದ್ದಾರೆ.










