ಡಾ. ಎಂ.ಎಸ್. ಮಣಿ
ಇವೆಲ್ಲವೂ `ಆರ್ಥಿಕ ದರ’ವನ್ನು ಮುಂದಿನ ದಿನಗಳಲ್ಲಿ ಸರಿಪಡಿಸಬಹುದು ಎಂಬ ಆಶಾಭಾವನೆ ಎಲ್ಲರಲ್ಲೂ ಇತ್ತು. ತಿಂಗಳಾದರೂ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿಯೇ ಸಾಗುತ್ತಿದೆ. ಇದರಿಂದ `ಆರ್ಥಿಕ ವ್ಯವಸ್ಥೆ’ ನಿಂತ ನೀರಾಗಿಬಿಟ್ಟಿದೆ. ಇದಕ್ಕೆ ಅರ್ಥ ಮಂತ್ರಿಯೊಬ್ಬರೇ ಹೊಣೆಗಾರರಲ್ಲ. ಎನ್‍ಡಿಎ ನೇತೃತ್ವದ ಸರ್ಕಾರ ತನ್ನ ಆಡಳಿತದ ಮೊದಲ ಅವಧಿಯಲ್ಲಿ ತೆಗೆದುಕೊಂಡ ಕ್ರಮಗಳ ಜೊತೆಗೆ ಎರಡನೇ ಅವಧಿಯ ಆಡಳಿತದಲ್ಲಿ ತೆಗೆದುಕೊಂಡ ಕ್ರಮಗಳು ಕಾರಣವಾಗಿವೆ.
ಮುಖ್ಯವಾಗಿ ಮಾರುಕಟ್ಟೆಯ ಏರಿಳಿತಗಳನ್ನು ಸರ್ಕಾರ ಅರಿಯದಿರುವುದು ಒಂದು ಕಾರಣವಾಗಿದೆ. ನಿವ್ವಳ ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ದ ಏರಿಳಿತವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಇದು 2016-17ರಲ್ಲಿ ಶೇಕಡ 8.2ರಷ್ಟಿತ್ತು. 2018-19ರಲ್ಲಿ ಶೇಕಡ 6.8ಕ್ಕೆ ಕುಸಿದಿದೆ. 2018-19ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 5.8ಕ್ಕೆ ಕುಸಿದಿದೆ. 2019-20ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 5.6ಕ್ಕೆ ಇಳಿದಿದೆ. ಇಂತಹ ಕುಸಿತ ಕಳೆದ 6 ವರ್ಷಗಳಲ್ಲಿ ಮೊದಲ ಬಾರಿಗೆ ಕಂಡುಬಂದಿದೆ. ಇದನ್ನು ಸರಿಪಡಿಸಲೆಂದೇ ಆರ್‍ಬಿಐನಿಂದ ರೂ. 1.78 ಲಕ್ಷ ಕೋಟಿಯನ್ನು ಒದಗಿಸಲಾಗಿದೆ. ಇದಕ್ಕಿಂತಲೂ ಕಳವಳಕಾರಿ ಸಂಗತಿಯೆಂದರೆ, ಖಾಸಗಿ ಉಪಭೋಗ ವಲಯದ ಬೇಡಿಕೆ ತೀವ್ರವಾಗಿ ಕುಸಿದಿದೆ. ಇದು ನಿವ್ವಳ ರಾಷ್ಟ್ರೀಯ ಉತ್ಪನ್ನಕ್ಕೆ ಶೇಕಡ 60ರಷ್ಟು ಕೊಡುಗೆ ನೀಡುತ್ತದೆ. ಇದೀಗ ಹದಿನೆಂಟು ಕಾಲು ಭಾಗದಷ್ಟು ಕುಸಿದಿದೆ. ಅಂದರೆ ಮೂರು ತಿಂಗಳಲ್ಲಿ ಶೇಕಡ 7.2ರಷ್ಟಿಂದ ಶೇಕಡ 3.1ರಷ್ಟಕ್ಕೆ ಕುಸಿದಿದೆ. ಹೂಡಿಕೆ ಚಟುವಟಿಕೆಗಳಿಂದ ಪ್ರಾಕ್ಸಿಯಾಗಿ ಶೇಕಡ 4ರಷ್ಟು ಹೆಚ್ಚಳವಾಗಿದೆ. ಇದು 12 ತಿಂಗಳ ಹಿಂದೆ ಶೇಕಡ 13.3ರಷ್ಟಿತ್ತೆಂದು ಆರ್‍ಬಿಐ ತನ್ನ ವರದಿಯಲ್ಲಿ ಹೇಳಿದೆ. ಇದರಂತೆ ಸ್ಥಿರ ಬಂಡವಾಳ ರಚನೆಯಲ್ಲಿ ಬೆಳವಣಿಗೆ ಕಂಡಿಲ್ಲ. ಅದರಲ್ಲೂ ನಿವ್ವಳ ಮೌಲ್ಯವರ್ಧನೆ ಆಗಿರುವುದು ನಿರ್ಮಾಣ ಉದ್ಯಮದಲ್ಲಿ ಮಾತ್ರ ಕಂಡುಬಂದಿದೆ. ಸರ್ಕಾರ ಅಂಕಿ ಅಂಶ ಬಹಿರಂಗ ಪಡಿಸಿದಂತೆ ಶೇಕಡ 9.6ರಿಂದ ಶೇಕಡ 5.7ಕ್ಕೆ ಇಳಿದಿದೆ. ಇದರೊಂದಿಗೆ ತಯಾರಿಕೆ ಉತ್ಪನ್ನಗಳು, ಕಾರಿನ ಭಾಗಗಳು, ಗ್ರಾಹಕ ಉತ್ಪನ್ನಗಳು ಸೇರಿದಂತೆ ಆಹಾರ ಉತ್ಪಾದಕ ವಸ್ತುಗಳಾದ ಬಿಸ್ಕತ್ತುಗಳ ಬೇಡಿಕೆ ಸಹ ಇಳಿಮುಖ ಕಂಡಿದೆ. ಉತ್ಪಾದಕ ನಿವ್ವಳ ಮೌಲ್ಯವರ್ಧನೆ ಕೂಡ 0.6ರಷ್ಟು ಇಳಿದಿದೆ. ವಾಸ್ತವವಾಗಿ ಗಣಿಗಾರಿಕೆ, ವಿದ್ಯುತ್ ಮತ್ತು ಬಳಕೆದಾರ ವಸ್ತುಗಳು, ಸಾರ್ವಜನಿಕ ಆಡಳಿತ, ರಕ್ಷಣೆ ಇವುಗಳೆಲ್ಲವೂ ಕಳೆದೊಂದು ವರ್ಷದಿಂದ ನಿವ್ವಳ ಮೌಲ್ಯವರ್ಧನೆಯಲ್ಲಿ ಕ್ಷೀಣಿಸುತ್ತಿತ್ತು. ಇದೆಲ್ಲವನ್ನೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಕಳೆದ ಸಾಲಿನ ಹಣಕಾಸು ನೀತಿಯಲ್ಲಿ ಗಮನಿಸಿತ್ತು. ಕಳೆದ ಜುಲೈನಲ್ಲಿ ನಡೆಸಿರುವ ಗ್ರಾಹಕರ ಸಮೀಕ್ಷೆಯಲ್ಲಿ ಕೆಟ್ಟ ಮಟ್ಟ ತಲುಪಿತ್ತು.
ಇಲ್ಲಿ ಬಳಕೆಯ ವೆಚ್ಚವೂ ಆದಾಯದೊಂದಿಗೆ ನೇರವಾಗಿ ಸಂಬಂಧವನ್ನು ಹೊಂದಿರುತ್ತದೆ. ಮಧ್ಯಮ ಮತ್ತು ಕೆಳವರ್ಗದ ಜನ ದೇಶದ ಜನಸಂಖ್ಯೆಯಲ್ಲಿ ಅತಿ ಹೆಚ್ಚಾಗಿದ್ದಾರೆ. ಹೀಗಾಗಿ ಇವರ ಪಾತ್ರವೇ ಬಹಳ ದೊಡ್ಡದಾಗಿದೆ. ಹೀಗಾಗಿ ಮೊದಲು ಈ ವರ್ಗಗಳ ಜನರ ಸಂಬಳ, ವೆಚ್ಚವನ್ನು ಸುಧಾರಣೆ ಮಾಡುವತ್ತ ಗಮನ ಹರಿಸಬೇಕಿದೆ. ವೇತನ ಹೆಚ್ಚಳ ಕೂಡ ಉಳಿತಾಯ ಮತ್ತು ಹೂಡಿಕೆಯೊಂದಿಗೆ ಸಂಬಂಧವನ್ನು ಹೊಂದಿದೆ. ಇದನ್ನು 2018-19ರ ಆರ್ಥಿಕ ಸಮೀಕ್ಷೆ ತೋರಿಸಿಕೊಟ್ಟಿದೆ. ವೇತನ ಹೆಚ್ಚಳ ಮಾಡಿದಾಗ, ಉಳಿತಾಯದ ದರ ಹೆಚ್ಚಾಗುತ್ತದೆ. ಇದರನ್ವಯ ನಮ್ಮ ದೇಶದಲ್ಲಿ ಉತ್ತಮ ಸಂಬಳ ನೀಡುವ ಉದ್ಯೋಗಗಳು ಸೃಷ್ಟಿಯಾಗಬೇಕು. ಜೊತೆಗೆ ದೇಶಾದ್ಯಂತ ಕನಿಷ್ಠ ವೇತನವನ್ನು ನೀಡುವ ಪರಿಪಾಠವೂ ಬರಬೇಕಿದೆ.
ಇನ್ನೂ ಅಮೆರಿಕಾ, ಜಪಾನ್, ಜರ್ಮನ್ ಸೇರಿದಂತೆ ಯುರೋಪಿಯನ್ ಮತ್ತು ಸ್ಥಳೀಯ ಉತ್ಪಾದಿತ ಕಾರುಗಳು ಹಾಗೂ ಭಾರಿ ವಾಹನಗಳ ಮಾರಾಟದಲ್ಲಿ ತೀವ್ರವಾದ ಕುಸಿತ ಕಂಡಿದೆ. ಉತ್ಪಾದಕರು `ಮೃತ್ಯುಚುಂಬನ’ಕ್ಕೆ ಒಳಗಾಗಿದ್ದಾರೆ. 2019-20ರ ತ್ರೈಮಾಸಿಕದಲ್ಲಿ ವಾಹನಗಳ ಮಾರಾಟದಲ್ಲಿ ಭಾರಿ ಇಳಿಕೆ ಕಂಡಿದೆ. ಆಟೋಮೊಬೈಲ್ ವಲಯದಲ್ಲಿ ಇದನ್ನು “ಸ್ನೋಬಾಲ್ ಕ್ರೈಸಿಸ್” ಎಂದೇ ಕರೆಯುತ್ತಿದ್ದಾರೆ. ಇದು 20 ವರ್ಷಗಳಲ್ಲಿ ಕಾಣದ ದಾಖಲೆ ಪ್ರಮಾಣದ ಕುಸಿತ. ಇಂತಹ ಕುಸಿತ ತಗ್ಗುತ್ತದೆ ಎಂದು ತಜ್ಞರು ಹೇಳಲು ಆಗುತ್ತಿಲ್ಲ. ಸುಮಾರು ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು, ಸಹಸ್ರಾರು ಜನ ಕಾರುಗಳ ಮಾರಾಟದ ಕುಸಿತದ ಬೇಗೆಯನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ, ಗ್ರಾಹಕರ ಪ್ರತಿರೋಧ, ಅತಿ ಹೆಚ್ಚು ದಾಸ್ತಾನುಗಳ ಸಂಗ್ರಹ, ದರ ಕಡಿತಗೊಳಿಸದ ವಾಹನಗಳ ಬಿಡಿಭಾಗ ತಯಾರಕರು, ವಿಶೇಷವಾಗಿ ಎನ್‍ಡಿಎ ಸರ್ಕಾರ ಏರಿಸಿರುವ ನೋಂದಣಿ ಶುಲ್ಕ ವಾಹನಗಳ ಮಾರುಕಟ್ಟೆಯ ಕತ್ತನ್ನೇ ಹಿಸುಕಿಹಾಕಿದೆ.

ವಾಹನಗಳ ದೇಶಿ ಮಾರಾಟ ದೇಶಾದ್ಯಂತ ಜುಲೈ ಮಾಸದಲ್ಲಿ ಶೇಕಡ 19ಕ್ಕೆ ಕುಸಿದಿದೆ. ಪ್ರಯಾಣಿಕರ ವಾಹನ ಶೇಕಡ 31ಕ್ಕೆ ಕುಸಿದಿದೆ. ದ್ವಿಚಕ್ರ ವಾಹನ ಶೇಕಡ 17ರಷ್ಟು ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಹನಗಳು ಶೇಕಡ 26ರಷ್ಟು ಕುಸಿದಿವೆ. ಇವರುಗಳೆಲ್ಲರೂ ದಸರಾ, ಗಣೇಶ, ದೀಪಾವಳಿ ಹಬ್ಬವನ್ನೇ ನಂಬಿಕೊಂಡು ಕಾದು ಕುಳಿತಿದ್ದರು. ದಸರಾ, ಗಣೇಶ ಮುಗಿಯಿತು. ಇನ್ನುಳಿದಿರುವುದು ದೀಪಾವಳಿ ಹಬ್ಬ ಮಾತ್ರ. ದೀಪಾವಳಿ ತಮ್ಮ ಬದುಕಿನಲ್ಲೂ ಬೆಳಕು ತರಬಹುದೆಂದು ವಾಹನ ಉತ್ಪಾದಕರು ಮತ್ತು ಕಾರ್ಮಿಕರು ಆಸೆಯ ಮೂಟೆ ಹೊತ್ತು ಕೂತಿದ್ದಾರೆ. ವಾಹನ ತಯಾರಕರು ದರದಲ್ಲಿ ಕಡಿತ ಮಾಡಿದರೆ, ಗ್ರಾಹಕರು ಆಕರ್ಷಿತರಾಗುತ್ತಾರೆ. ಆಗ ತಾತ್ಕಾಲಿಕವಾಗಿ ಮುಚ್ಚಿ ಕುಳಿತಿರುವ ಕಾರ್ಖಾನೆಗಳು ಮತ್ತೆ ತೆರೆಯಬಲ್ಲವು.
ಕಳೆದ 9 ತಿಂಗಳಿನಿಂದ ಪ್ರಯಾಣಿಕರ ವಾಹನ ಮಾರಾಟದಲ್ಲಿ ಹಿಂಜರಿತ ಕಂಡಿದೆ. ಇದರಿಂದ ವಾಹನ ಮಾರಾಟ ಕೇಂದ್ರಗಳು ಮುಚ್ಚಿಹೋಗಿವೆ. ಮಾರಾಟಗಾರರು, ಬಿಡಿಭಾಗಗಳ ತಯಾರಕರು, ವಾಹನ ತಯಾರಕರು ಮತ್ತದರ ಪೂರಕ ಘಟಕಗಳು ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿವೆ. ಆಟೋಮೊಬೈಲ್ ಡೀಲರ್ಸ್ ಫೆಡರೇಷನ್ “ಅತ್ಯಧಿಕ ಪ್ರಮಾಣದ ಉದ್ಯೋಗಗಳು ಅಪಾಯದಲ್ಲಿವೆ” ಎಂಬ ಎಚ್ಚರಿಕೆಯನ್ನು ನೀಡಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಕ್ಟೋಬರ್ 11ರಂದು ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ 2019 ಏಪ್ರಿಲ್-ಸೆಪ್ಟೆಂಬರ್‍ನಲ್ಲಿ 1,66,45,300ರಷ್ಟು ಪ್ರಯಾಣಿಕರ ವಾಹನ, ವಾಣಿಜ್ಯ ವಾಹನ, ತ್ರಿಚಕ್ರ ವಾಹನ, ದ್ವಿಚಕ್ರ ವಾಹನ ಉತ್ಪಾದನೆಯಾಗಬೇಕಿತ್ತು. ಆದರೆ, 1,44,27,724 ವಾಹನಗಳನ್ನು ಮಾತ್ರ ಉತ್ಪಾದಿಸಲಾಗಿದೆ ಎಂದು ಹೇಳಿದೆ.
ಜಗತ್ತಿನ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆ ಹಿನ್ನೆಡೆ ಅನುಭವಿಸುತ್ತಿವೆ. `ಪ್ರಯಾಣಿಕರ ವಾಹನ’ ಮಾರಾಟ ಶೇಕಡ 36ಕ್ಕೆ ಮುಳುಗಿದೆ. ಇದರ ಪರಿಣಾಮವನ್ನು 1,22,956 ಘಟಕಗಳು ಅನುಭವಿಸಲಿವೆ. `ಉಪಯೋಗಿಸುವ ವಾಹನ’ ಮಾರಾಟ ಶೇಕಡ 15ಕ್ಕೆ ಕುಸಿದಿದೆ. ಇದರ ಪರಿಣಾಮವನ್ನು 67,070 ಘಟಕಗಳು ಅನುಭವಿಸಲಿವೆ. `ವ್ಯಾನು’ಗಳ ಮಾರಾಟ ಶೇಕಡ 15ಕ್ಕೆ ಕುಸಿದಿದೆ. ಇದರ ಪರಿಣಾಮವನ್ನು 10,804 ಘಟಕಗಳು ಅನುಭವಿಸಲಿವೆ. ಇಲ್ಲಿ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಸಗಟು ಮಾರಾಟದ ಅಂಕಿ-ಸಂಖ್ಯೆಯನ್ನು ಮಾತ್ರ ಬಿಡುಗಡೆಗೊಳಿಸುತ್ತದೆ. ಮಹಿಂದ್ರ ಮತ್ತು ಮಹಿಂದ್ರ ಕಂಪನಿಯ XUV300, ಹುಂಡೈ ಕಂಪನಿಯ VENUE ಮತ್ತು ಎಂ.ಜಿ. ಮೋಟರ್ಸ್ ಕಂಪನಿಯ ಹೆಕ್ಟಾರ್ ಮಾಡೆಲ್ಲಿನ ಕಾರುಗಳು ಮಾತ್ರ ಕುಸಿತವನ್ನು ಕಂಡಿಲ್ಲ. ಇದೊಂದು ಭರವಸೆಯ ಬೆಳಕು. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ Vitara Brezza ಕಾರು ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಇದು ಬೇಡಿಕೆಯ ಕೊರತೆಯನ್ನು ಎದುರಿಸುತ್ತಿದೆ. ಅಲ್ಲದೆ, ಮುಂದಿನ ಸಾಲಿನ ಏಪ್ರಿಲ್‍ನಿಂದ ಡೀಸೆಲ್ ವಾಹನಗಳ ನಿಷೇಧ ಆಗುವುದರಿಂದಲೂ ಇಳಿಕೆ ಕಂಡಿರಬಹುದು. ಇದೇ ಸಾಲಿನ ಜುಲೈನಲ್ಲಿ ಹುಂಡೈ ದೇಶದ 10ರಷ್ಟು, ಮಹಿಂದ್ರ ಮತ್ತು ಮಹಿಂದ್ರ ಶೇಕಡ 15ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ.
ಇವೆಲ್ಲವನ್ನೂ ಅವಲೋಕಿಸಿಯೇ ಆಟೋಮೊಬೈಲ್ ಡೀಲರ್ಸ್ ಫೆಡರೇಷನ್ ಅತ್ಯಧಿಕ ಪ್ರಮಾಣದ ಉದ್ಯೋಗಗಳು ಅಪಾಯದಲ್ಲಿವೆ ಎಂಬ ಎಚ್ಚರಿಕೆಯನ್ನು ನೀಡಿರಬೇಕು. ಈಗಾಗಲೇ 3.52 ಲಕ್ಷ ಹುದ್ದೆಯ ಸ್ಥಾನಮಾನಗಳು ಕೈತಪ್ಪಿ ಹೋಗಿವೆ. ಕಳೆದ 4 ತಿಂಗಳಿಗೂ ಹೆಚ್ಚು ಕಾಲದಿಂದ 15 ಸಾವಿರಕ್ಕೂ ಹೆಚ್ಚು ಗುತ್ತಿಗೆ ಆಧಾರಿತ ನೌಕರರನ್ನು ವಜಾಗೊಳಿಸಲಾಗಿದೆ. ಇದು ವಾಹನ ವಲಯದ ಅಂಕಿ-ಅಂಶವಾಗಿದ್ದು ಆರ್‍ಬಿಐ ಕೂಡ ಅಂಗೀಕರಿಸಿದೆ. ಖಾಸಗಿ ಉಪಭೋಗ, ಒಟ್ಟು ಬೇಡಿಕೆಯ ಮೂಲಾಧಾರವೇ ಕುಸಿತ ಕಂಡಿದೆ. ಇಂತಹ ಕುಸಿತವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಣಬಹುದು. ಇಂತಹದ್ದೊಂದು ಬಿಕ್ಕಟ್ಟಿನ ಕರಿನೆರಳಿಗೆ ಕಾರಣ ಹುಡುಕಲು ದೂರ ಹೋಗಬೇಕಿಲ್ಲ. ಬೇಡಿಕೆ ಕುಸಿತದ ಕಾರಣಗಳನ್ನು ವಾಹನ ತಯಾರಿಕ ವಲಯವೇ ಗುರ್ತಿಸಿದೆ. ಇದರಲ್ಲಿ ಎನ್‍ಬಿಎಫ್‍ಸಿ ಉದ್ದಿಮೆಯಲ್ಲಿರುವ ದ್ರವ್ಯತೆಯ ಸಮಸ್ಯೆ ಮತ್ತು ವಾಹನ ಕೊಳ್ಳಲು ಬಿಗಿಯಾದ ಸಾಲ ಸೌಲಭ್ಯ ನಿಯಮಗಳು ಜೊತೆಗೆ ಹೆಚ್ಚಾದ ವಿಮಾ ವೆಚ್ಚ ಪ್ರಮುಖವಾಗಿವೆ. ಅದರಲ್ಲೂ ವಾಹನ ಕೊಳ್ಳಲು ಪಾವತಿಸಬೇಕಾದ ಜಿಎಸ್‍ಟಿ ಕೂಡ ಒಂದಾಗಿದೆ. ಇದಲ್ಲದೆ, ಗಣೇಶ ಮತ್ತು ಓಣಂ ಹಬ್ಬಗಳ ಪೂರ್ವದಲ್ಲಿ ಕರ್ನಾಟಕ ಕೇರಳ, ಮಹಾರಾಷ್ಟ್ರದಲ್ಲಿ ಬಿದ್ದ ಭೀಕರ ಮಳೆಯಿಂದ ನೆರೆಯಾಗಿ `ಆಟೋಮೊಬೈಲ್ ಉದ್ದಿಮೆ’ ಬೇಡಿಕೆಯನ್ನು ಕಳೆದುಕೊಂಡಿದೆ.

ಇನ್ನೂ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಆರ್ಥಿಕ ಹಿಂಜರಿತ ಭಾರಿ ವಾಹನಗಳಾದ ಸರಕು ಸಾಗಿಸುವ ಸಾಮಥ್ರ್ಯ ಉಳ್ಳ ಟ್ರಕ್ಕು, ಲಾರಿ, ಹಡಗುಗಳ ಮೇಲೂ ಆಗಿವೆ. ಇವುಗಳ ಮಾರಾಟ ಕೂಡ ಪತನಗೊಂಡಿದೆ. ಇದಕ್ಕೆ ಹಡಗು ಮಾಲೀಕರು ತಮ್ಮ ಬಳಿ ಇರುವ ಟ್ರಕ್ಕುಗಳ ಮೇಲೆಯೇ ಇನ್ನಷ್ಟು ಸರಕುಗಳನ್ನು ಹೊರಿಸಿ ಸಾಗಿಸುತ್ತಿರುವುದು ಕಾರಣವಾಗಿದೆ. ಕೃಷಿ ಮತ್ತು ಇತರೆ ಚಟುವಟಿಕೆಗಳಿಗೆ ಬೇಕಾದ ಸರಕು ಸಾಗಿಸುವ ವಾಹನಗಳ ಮಾರಾಟವೂ ಕುಸಿದಿದೆ.
ಮಧ್ಯಮ ಮತ್ತು ವಾಣಿಜ್ಯ ಆಧಾರಿತ ವಾಹನಗಳು ಜುಲೈನಲ್ಲಿ 17,722 ಘಟಕಗಳಿಂದ ಶೇಕಡ 37ರಷ್ಟು, ಲಘು ವಾಣಿಜ್ಯ ವಾಹನಗಳು 39,144 ಘಟಕಗಳಿಂದ ಶೇಕಡ 19ರಷ್ಟು, ವಾಣಿಜ್ಯ ವಾಹನಗಳು 56,866 ಘಟಕಗಳಿಂದ ಶೇಕಡ 26ರಷ್ಟು ಕುಸಿತ ಕಂಡಿದೆ. ಇದೇ ರೀತಿ ದ್ವಿಚಕ್ರ ವಾಹನಗಳು 1.51 ಮಿಲಿಯನ್ ಘಟಕಗಳಿಂದ ಶೇಕಡ 17ರಷ್ಟು, ಮೋಟರ್ ಸೈಕಲ್‍ಗಳು 9,33,966 ಘಟಕಗಳಿಂದ ಶೆಕಡ 19ರಷ್ಟು, ಸ್ಕೂಟರ್‍ಗಳು 5,26,504 ಘಟಕಗಳಿಂದ ಶೇಕಡ 12ರಷ್ಟು ಕುಸಿತವನ್ನು ಕಂಡಿವೆ.
ಹೀಗಾಗಿ ಆಟೋಮೊಬೈಲ್ ಘಟಕಗಳು ಬಿಕ್ಕಟ್ಟು ಎದುರಿಸಲಾಗದೆ ಮುಚ್ಚಿ ಹೋಗುತ್ತಿವೆ. ಸದ್ಯಕ್ಕೆ ಇವರು ತಮ್ಮಲ್ಲಿ ದಾಸ್ತಾನು ಮಾಡಿಕೊಂಡಿರುವ ಭಾಗಗಳನ್ನು ಮಾರಾಟ ಮಾಡಿಕೊಂಡರೆ ಸಾಕಾಗಿದೆ. ಹೀಗಾಗಿಯೇ ಕಾರ್ಮಿಕರು ವಜಾಗೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೇ ಕಾರಣಕ್ಕೆ ಗುರುಗಾಂವ್‍ನ ಡೀಸೆಲ್ ಇಂಜಿನ್ ಸ್ಥಾವರದ ಮೇಲೆ 1,700 ಕೋಟಿ ಹೂಡಲು ಮುಂದಾಗಿದ್ದ ಮಾರುತಿ-ಸುಜುಕಿ ಕಂಪನಿ ಹಿಂದೇಟು ಹಾಕಿದೆ. ಇದನ್ನು ಮತ್ತೊಂದು ಉದ್ದೇಶಕ್ಕೆ ಬಳಸಲು ಮುಂದಾಗಿದೆ. ಇದರಂತೆಯೇ ವಾಣಿಜ್ಯ ವಾಹನಗಳ ಉತ್ಪಾದಕ ಬಾಬಾ ಮೋಟಾರ್ಸ್ ಜೆಮ್‍ಶೆಡ್‍ಪುರ ಮತ್ತು ಪುಣೆಯಲ್ಲಿನ ತನ್ನ ಘಟಕಗಳನ್ನು 12 ದಿನಗಳ ಕಾಲ ಮುಚ್ಚಿತ್ತು. ಹೀಗೆಯೇ ವಾಣಿಜ್ಯ ವಾಹನಗಳ ತಯಾರಿಕೆಯಲ್ಲಿ 3ನೇ ಸ್ಥಾನದಲ್ಲಿರುವ ಅಶೋಕ್ ಲೈಲ್ಯಾಂಡ್ ಲಿಮಿಟೆಡ್ ಕೂಡ ತನ್ನ ಪಟ್ನಾಗರ್ ಘಟಕವನ್ನು 9 ದಿನಗಳ ಮಟ್ಟಿಗೆ ಮುಚ್ಚಿತ್ತು. ಮಾರುತಿ ಕಂಪನಿ ಜುಲೈ ತಿಂಗಳಿನಿಂದಲೇ 6 ತಿಂಗಳ ಉತ್ಪಾದನೆಯನೆಯನ್ನು ಕಡಿತಗೊಳಿಸಿದೆ. ಆರ್‍ಬಿಐ ಕೂಡ “ಗ್ರಾಹಕರ ವಿಶ್ವಾಸ ಸಮೀಕ್ಷೆ”ಯಲ್ಲಿ ಬಳಕೆದಾರರ ಆತ್ಮಸ್ಥೈರ್ಯ ಕುಸಿದಿರುವುದನ್ನು ಗಮನಿಸಿದೆ.
2025ಕ್ಕೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ವೃದ್ಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಇದಾಗಬೇಕಾದರೆ, ವಾರ್ಷಿಕ ಶೇಕಡ 8ರಷ್ಟು ಆರ್ಥಿಕ ಬೆಳವಣಿಗೆ ಆಗಬೇಕು. ಇಂತಹದ್ದೊಂದು ಗುರಿಯನ್ನು ಕಳೆದೆರಡು ದಶಕಗಳಲ್ಲಿ ಕೆಲವೇ ಕೆಲವು ವಿಷಯಗಳಲ್ಲಿ ಮಾತ್ರ ಸಾಧಿಸಲಾಗಿದೆ. ಹೀಗಾಗಿ ಮೋದಿ ಅವರು ಬಂಡವಾಳ ಹೆಚ್ಚಿಸುವ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಇದರಂತೆ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ಬಂಡವಾಳ ವೃದ್ಧಿ, ಕೃಷಿ ವಲಯದ ಉತ್ಪತ್ತಿ ಮತ್ತು ರಫ್ತುಗಳನ್ನು ಹೆಚ್ಚಿಸಲು ಉತ್ತೇಜನ, ಕೈಗಾರಿಕಾ ಉತ್ಪನ್ನಗಳ ವೃದ್ಧಿ, ಸೇವಾವಲಯಕ್ಕೆ ಪ್ರೋತ್ಸಾಹ, ವ್ಯಾಪಾರ ವಹಿವಾಟು ನಡೆಸಲು ಸುಗಮ ಹಾದಿಯ ನಿರ್ಮಾಣ, ವ್ಯಾಪಾರಿ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವಿಕೆ, ಪ್ರಾಮಾಣಿಕ ತೆರಿಗೆದಾರರಿಗೆ ಕಿರುಕುಳ ನೀಡುವುದಿಲ್ಲವೆಂಬ ಅಭಯ ಸೇರಿದಂತೆ ಹಲವು ಭರವಸೆ ನೀಡಿದ್ದಾರೆ. ವಿದೇಶಿ ಹೂಡಿಕೆದಾರರಿಗೆ ಇದ್ದ ಹಲವು ಕೆಂಪು ಪಟ್ಟಿಯ ಷರತ್ತುಗಳನ್ನು ತಪ್ಪಿಸಲು ಮುಂದಾಗಿದ್ದಾರೆ. ಇದು ಉತ್ತೇಜನ ನೀಡಿದಂತಾಗಿದೆ.
ಜಗತ್ತಿನಲ್ಲಿಯೇ ಅತ್ಯಧಿಕ ಬಡ್ಡಿದರವನ್ನು ನಮ್ಮ ದೇಶದಲ್ಲಿ ವಿಧಿಸಲಾಗುತ್ತಿದೆ. ಅದರಲ್ಲೂ ದೇಶ “ನ್ಯಾಷನಲ್ ಪರ್‍ಫಾರ್ಮಿಂಗ್ ಅಸೆಟ್ಸ್”ನ ಬಿಕ್ಕಟ್ಟು ಎದುರಿಸುತ್ತಿದ್ದರಿಂದಲೂ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದಲ್ಲದೆ 11ರ ಆಧಾರದ ಮೇಲಿನ ದರ ಕಡಿತದ ಪಾಯಿಂಟ್‍ನ ನಡುವೆಯೂ ನಮ್ಮ ಬಡ್ಡಿದರ ಅತ್ಯಧಿಕವಾಗಿಯೇ ಇದೆ. ಬಂಡವಾಳ ಅಧಿಕವಾಗಿ ವೆಚ್ಚ ಆಗುವುದಕ್ಕೆ ರೋಗಗ್ರಸ್ಥ ಆಸ್ತಿಗಳ ವಸೂಲಾತಿಯಲ್ಲಿ ನಿಧಾನಗತಿಯನ್ನು ತೋರಿಸುವುದು ಕಾರಣವಾಗಿದೆ. ಇದೇ ಭಾರತದ ಉದ್ದಿಮೆಗಳ ಬೆಳವಣಿಗೆಗೆ ಅಡ್ಡಗಾಲಾಗಿದೆ ಮತ್ತು ಸಾಮಥ್ರ್ಯವನ್ನು ಕುಗ್ಗಿಸಿದೆ. ಜಗತ್ತಿನಾದ್ಯಂತ ಬಡ್ಡಿದರ 0ಯಿಂದ ಶೇಕಡ 1ರಷ್ಟು ಇದ್ದಾಗಲೂ ನಮ್ಮ ಬಡ್ಡಿದರ ಶೇಕಡ 2.2ರಷ್ಟಿತ್ತು. ಹೀಗಿರುವುದರಿಂದ ನಮ್ಮ `Repo Rates’ನ್ನು ಕಡಿತಗೊಳಿಸಬೇಕಿದೆ. ಜೊತೆಗೆ ಬಡ್ಡಿದರವನ್ನು ಜಾಗತಿಕವಾಗಿ ಇರುವಷ್ಟು ಮಾತ್ರವೇ ನಿಗದಿಪಡಿಸಬೇಕಿದೆ.
ಇನ್ನೂ ಭಾರತದ ಬಹುಜನ ಅವಲಂಬಿತವಾಗಿರುವ `ಕೃಷಿ ವಲಯ’ ಕಡಿಮೆ ಆದಾಯದ ಸುಳಿಯಲ್ಲಿ ಸಿಲುಕಿದೆ. ಕಾರಣ, ಈ ಸಾಲಿನಲ್ಲಿ ಮುಂಗಾರು ಮಳೆಯ ಅಬ್ಬರ ರೈತರು ಬೆಳೆದ ಬೆಳೆಯನ್ನು ನುಂಗಿಹಾಕಿದೆ. ಇನ್ನೂ ಕೆಲವೆಡೆ ಮಳೆಯ ಕೊರತೆಯಿಂದಲೂ ಬೆಳೆ ಹಾನಿಗೊಳಗಾಗಿದೆ. ಸಾಲದಕ್ಕೆ ಕರ್ನಾಟಕ ಸೇರಿದಂತೆ ಹಲವೆಡೆ ಮನೆ-ಮಠ, ಜನ-ಜಾನುವಾರುಗಳು ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಕೆಲವೆಡೆ ಊರಿಗೆ ಊರೇ ನಾಶವಾಗಿದೆ. ಅಲ್ಲಿನ ಜನ ತಮ್ಮ ಮನೆ-ಮಠ ಎಲ್ಲಿದೆ ಎಂದು ಹುಡುಕಬೇಕಾದ ಸ್ಥಿತಿ ಇದೆ. ಇಲ್ಲಿನ ಜನ ಗಂಜಿ ಕೇಂದ್ರಗಳಲ್ಲಿದ್ದಾರೆ. ಇವರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ದುಡ್ಡಿಲ್ಲ. ದುಡ್ಡಿನ ಅಭಾವದಿಂದ ಕರ್ನಾಟಕದ ಮುಖ್ಯಮಂತ್ರಿ `ಪುನರ್ವಸತಿ ಕೇಂದ್ರ ಬೇಕೋ’ ಅಥವಾ `ಪರಿಹಾರ ಬೇಕೋ’ ಎಂಬ ಪ್ರಶ್ನೆಯನ್ನು ಸಂತ್ರಸ್ತರ ಮುಂದಿಟ್ಟಿದ್ದಾರೆ. ಇಂತಹ ದಯನೀಯ ಸ್ಥಿತಿಯಲ್ಲಿ ತೆರಿಗೆ ಕಟ್ಟುವ ಮಾನವ ಸಂಪನ್ಮೂಲಕ್ಕೆ ಸರ್ಕಾರ ಆಯ್ದುಕೊಳ್ಳಲು ಕೊಟ್ಟಿರುವ `ಆಯ್ಕೆ’ ಯಾತನೆ ಮೂಡಿಸುತ್ತದೆ. ಇದಕ್ಕಿಂತಲೂ ನೋವುಂಟು ಮಾಡಿದ್ದು `ಪ್ರಧಾನ ಮಂತ್ರಿಗಳ ಕಿಸಾನ್ ಯೋಜನೆ’ ಇದರಂತೆ. ದೇಶದ ಬೆನ್ನೆಲುಬು ರೈತನ ಖಾತೆಗೆ ಪ್ರತಿ ವರ್ಷ 6 ಸಾವಿರ ಜಮಾ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇದೊಂದು ನೆರವಿನ ಕ್ರಮ ಎಂದು ಬಿಂಬಿಸಿಯೂ ಆಗಿದೆ. ಆದರೆ, ಇದರ ವ್ಯಾಪ್ತಿಗೆ ದೇಶದ ಜನಸಂಖ್ಯೆಯಲ್ಲಿ ಶೇಕಡ 54.9ರಷ್ಟಿರುವ ಭೂರಹಿತ ಕೃಷಿ ಕಾರ್ಮಿಕರನ್ನು ಗಣನೆಗೇ ತೆಗೆದುಕೊಂಡಿಲ್ಲ.
ಕಡಿಮೆ ವೆಚ್ಚ ಬಯಸಿ, ಹೆಚ್ಚಿನ ಶ್ರಮ ನಿರೀಕ್ಷಿಸುವ `ನರೇಗಾ’ದಂತಹ ಯೋಜನೆಗಳನ್ನು ಬಲಪಡಿಸಬೇಕೆಂದು 2018-19ರ ಆರ್ಥಿಕ ಸರ್ವೆ ತಿಳಿಸಿದೆ. `ನರೇಗಾ ಯೋಜನೆ’ಯು ಅನುದಾನದ ಕೊರತೆಯಿಂದ ನರಳುತ್ತಿದೆ. ಹೀಗಾಗಿ ವೇತನವನ್ನು ನಿಧಾನವಾಗಿ ನೀಡಲಾಗುತ್ತಿದೆ. ನಾಲ್ಕು ರಾಜ್ಯಗಳಲ್ಲಿ ರೂ. 1 ಮತ್ತು 2ರಷ್ಟನ್ನು 6 ರಾಜ್ಯಗಳಲ್ಲಿ ರೂ. 10ರಿಂದ 17ರಷ್ಟನ್ನು ಹೆಚ್ಚಿಸಿದ್ದಾರೆ.
ಇವತ್ತು `ಉದ್ಯೋಗ ಸೃಷ್ಟಿ’ಯೊಂದಿಗೆ, `ಸಂಪತ್ತಿನ ಪುನರ್ ಹಂಚಿಕೆ’ಯನ್ನು ಅತ್ಯಂತ ನಿರ್ಲಕ್ಷ್ಯವಾಗಿ ಕಾಣಲಾಗುತ್ತಿದೆ. ಅಲ್ಲದೆ 2017-18ರ PLFS ವರದಿಯನ್ನು ಬಿಡುಗಡೆಗೊಳಿಸಿಲ್ಲ. ಈ ವರದಿ 2017-18ರ ಸಾಲಿನ ಉದ್ಯೋಗ ಮಾಹಿತಿ ಮತ್ತು ಮಟ್ಟವನ್ನು ಅಂದಾಜು ಮಾಡುತ್ತಿತ್ತು. ಹೀಗಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಜೊತೆಗೆ ದುಡಿಯುವ ವರ್ಗದ ಜನಸಂಖ್ಯೆಯ ಬಹುಪಾಲು ಜನ ಶ್ರಮದ ಮಾರುಕಟ್ಟೆಯಿಂದ ದೂರ ಉಳಿದಿದ್ದಾರೆ. ಕಾರಣ ಶ್ರಮದ ಮಾರುಕಟ್ಟೆಯಲ್ಲಿ ಉದ್ಯೋಗ ಖಾಲಿ ಇಲ್ಲ.
ಇಷ್ಟಾದರೂ ಸರ್ಕಾರ ವಿಚಲಿತಗೊಂಡಿಲ್ಲ. ಚಿಂತಾಕ್ರಾಂತವೂ ಆಗಿಲ್ಲ. ಕಾರಣ, ನಿರುದ್ಯೋಗದ ಸಮಸ್ಯೆಯನ್ನೇ ಗುರ್ತಿಸಿಕೊಂಡಿಲ್ಲ. ಇರಲಿ, ಇದರ ನಡುವೆ ಸರ್ಕಾರ ತೋರಿರುವ ಉದಾರ ಆರ್ಥಿಕ ಕ್ರಮಗಳು ಈ ಸಾಲಿನ ಕೊನೆಯ ಭಾಗದಲ್ಲಿ ಪ್ರತಿಫಲಿಸಬಹುದು. ಇದು ಕೂಡ ನಾವು `ಆರ್ಥಿಕ ನೀತಿ’ಯನ್ನು ರೂಪಿಸಿಕೊಳ್ಳುವುದರ ಮೇಲೆ ನಿಂತಿರುತ್ತದೆ. ಹಿಂದೆಯಿಂದಲೂ ಸ್ವಲ್ಪ ಅಡ್ಡಾದಿಡ್ಡಿಯಾಗಿ ಸಾಗಿರುವಂತಿದೆ. ಆದರೂ ತೆರಿಗೆ ಕ್ಷೇತ್ರದಲ್ಲಿ ಸುಧಾರಣೆ ಕಾಣಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಬೆಳವಣಿಗೆದರ ಶೇಕಡ 7ಕ್ಕಿಂತ ಕೆಳಗಡೆ ಸಾಗುವುದಿಲ್ಲ.ಇದ್ದಕ್ಕೆ ಬಡ್ಡಿ ದರ ಇಳಿಸಬೇಕೆಬುಂದು ಉದ್ಯಮಿ ಆರ್.ಪಿ. ಸಾಂಬಸದಾಶಿವ ರೆಡ್ಡಿ ಅವರ ಅಭಿಪ್ರಾಯವಾಗಿದೆ.










