ಕೊಪ್ಪಳ: ತಂದೆಯ ಸಾಲ ತೀರುತ್ತದೆ ಎಂದು ಸುಳ್ಳು ಹೇಳಿ 16 ವರ್ಷದ ಬಾಲಕನನ್ನು ಬೆತ್ತಲೆಗೊಳಿಸಿ ಅವಮಾನ ಮಾಡಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ನಿವಾಸಿ ನೊಂದ ಬಾಲಕ. ನಿಮ್ಮ ಅಪ್ಪನ ಸಾಲ ತೀರಬೇಕೆಂದರೆ ನೀನು ಬೆತ್ತಲೆ ಪೂಜೆ ಮಾಡಬೇಕು. ಅದರಿಂದ ದುಡ್ಡು ಬರುತ್ತದೆ. ಮತ್ತೆ ಸಾಲ ಕೂಡ ತೀರುತ್ತದೆ. ಜೊತೆಗೆ ಬಡತನ ನಿವಾರಣೆ ಆಗುತ್ತದೆ ಎಂದು ಬಾಲಕನ ತಲೆ ಕೆಡಿಸಿದ್ದರು.
ಅಂತೆಯೇ ಹುಬ್ಬಳ್ಳಿಯ ರೂಮ್ ವೊಂದರಲ್ಲಿ ಬಾಲಕನನ್ನು ಬೆತ್ತಲೆ ಮಾಡಿ, ಪೂಜೆ ಮಾಡುವ ನಾಟಕವಾಡಿದ್ದಾರೆ. ಇದನ್ನು ವೀಡಿಯೋ ಮಾಡಿ ಫೇಸ್ ಬುಕ್, ವಾಟ್ಸಾಪ್ ಹಾಗೂ ಯೂಟ್ಯೂಬ್ ಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ.
ವಿರುಪನಗೌಡ, ಶರಣಪ್ಪ, ಶರಣಪ್ಪ ತಳವರ್ ಎಂಬವರೇ ಬಾಲಕನ ವಿಡಿಯೋ ಮಾಡಿದ ನೀಚರು. ಘಟನೆಯಿಂದ ನೊಂದ ಬಾಲಕ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.










