ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷದ ಮಗುವಿಗೆ ಅವಧಿ ಮೀರಿದ ಇಂಜಕ್ಷನ್ ನೀಡಿದ ಆರೋಪದ ಮೇಲೆ ನಗರದ ಸಂಜೀವಿನಿ ಆಸ್ಪತ್ರೆ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ಕ್ಷಮೆಯಾಚಿಸಿದ್ದು, ಈ ಸಂಬಂಧ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ:-
ತೀವ್ರ ಜ್ವರದಿಂದ ಬಳಲುತ್ತಿದ್ದ ಯಾದ್ವಿಯನ್ನು, ಪೋಷಕರು ಅಕ್ಟೋಬರ್ 29 ರಂದು ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಮಗು ಸುಸ್ತಾಗಿದೆ ಅಂತ ವೈದ್ಯರು ಡ್ರಿಪ್ಸ್ ಹಾಕಿದ್ದಾರೆ. ಈ ಮದ್ದು ಮಗುವಿನ ದೇಹಕ್ಕೆ ಹೋಗುತ್ತಿದ್ದಂತೆ ಮಗುವಿನ ತುಟಿಯಲ್ಲಿ ಸೌಲ್ಲಿಂಗ್, ಮತ್ತು ರಕ್ತಸ್ರಾವ ಪ್ರಾರಂಭವಾಯಿತು.
ಇದನ್ನ ಗಮನಿಸಿದ ಪೋಷಕರಿಗೆ, ವೈದ್ಯರು ಅವಧಿ ಮುಗಿದ ಡ್ರಿಪ್ಸ್ ಕೊಟ್ಟಿರುವುದು ಗೊತ್ತಾಗಿದೆ. ಇದನ್ನ ಪ್ರಶ್ನಿಸಿದ್ದಕ್ಕೆ ವೈದ್ಯರು ತಪ್ಪನ್ನೆ ಸಮರ್ಥಿಸಿಕೊಂಡಿದ್ದಾರೆ. ಕೂಡಲೇ ಮಗುವನ್ನು ಪೋಷಕರು ಬೇರೊಂದು ಆಸ್ಪತ್ರೆಗೆ ದಾಖಲಿಸಿ, ಸಂಜೀವಿನಿ ಆಸ್ಪತ್ರೆಯ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದರು.










