ಬೆಂಗಳೂರು: ನೂರಕ್ಕೂ ಹೆಚ್ಚು ಮನೆ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಆರೋಪಿ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್‍ನನ್ನು ಗೋವಿಂದರಾಜ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಹೆಣ್ಣೂರು ಪೊಲೀಸರು ಕಾರ್ತಿಕ್ ನನ್ನು ಬಂಧಿಸಿದ್ದರು. ಈ ಆರೋಪಿ ಕಳವು ಮಾಡಿದ ಚಿನ್ನಾಭರಣಗಳನ್ನು ಅಡವಿಟ್ಟು ವಿಲಾಸಿ ಜೀವನ ನಡೆಸುತ್ತಿದ್ದ. ಆರೋಪಿ ಕಾರ್ತಿಕ್ ಕೃತ್ಯದ ವೇಳೆ ಯಾರಿಗೂ ಹಲ್ಲೆ ಮಾಡಲ್ಲ. ಬೆದರಿಸೋದು ಇಲ್ಲ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮನೆಗಳ್ಳತನ ಮಾಡ್ತಾನೆ. ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕೈ ಚಳಕ ತೋರಿಸಿದ್ದಾನೆ.
ಇತ್ತೀಚೆಗೆ ಗೋವಿಂದರಾಜನಗರ ಹಾಗೂ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ. ಮತ್ತೆ ಆಕ್ಟಿವ್ ಆಗಿದ್ದ ಕಾರ್ತಿಕ್ ಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದರು. ಪ್ರಕರಣವೊಂದರಲ್ಲಿ ಆರೋಪಿಗಳ ಬಂಧನಕ್ಜೆ ತೆರಳಿದ್ದ ಪೊಲೀಸರಿಗೆ ಅಕಸ್ಮಿಕವಾಗಿ ಸಿಕ್ಕಿಬಿದ್ದಿದ್ದಾನೆ. ಗೋವಾದ ಕೆಸಿನೊ ಒಂದರಲ್ಲಿ ಜೂಜಾಡುವ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
2015 ರಲ್ಲಿ ಪರಪ್ಪನ ಅಗ್ರಹಾರದ ಜೈಲಿನಿಂದಲೇ ಕಾರ್ತಿಕ್ ತಪ್ಪಿಸಿಕೊಂಡಿದ್ದ. ಪರಪ್ಪನ ಅಗ್ರಹಾರದ ಜೈಲಿನಿಂದ ಹೊರಟಿದ್ದ ಇಸ್ಕಾನ್ ಊಟದ ವಾಹನದ ಕೆಳಭಾಗದಲ್ಲಿ ಅವಿತು ಎಸ್ಕೇಪ್ ಆಗಿದ್ದ. ಅಷ್ಟೇ ಅಲ್ಲದೇ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಎಸ್ಕೇಪ್ ಆಗಿದ್ದ. ಹೀಗಾಗಿ ಕಾರ್ತಿಕ್ ಗೆ ಎಸ್ಕೇಪ್ ಕಾರ್ತಿಕ್ ಎಂಬುವ ಹೆಸರು ಬಂದಿತ್ತು.










