ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ : ಬಿಎಂಟಿಎಫ್ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಬಂಧನ…

94
Firstsuddi

ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದಡಿ ಎಸಿಬಿ ಅಧಿಕಾರಿಗಳು ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ (ಬಿಎಂಟಿಎಫ್ ) ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು ಬಂಧಿಸಿದ್ದಾರೆ.

ಆದಾಯಕ್ಕಿಂತ ಹೆಚ್ಚು ಗಳಿಕೆ ಆರೋಪದ ಮೇಲೆ ನಿನ್ನೆ 9 ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿತ್ತು. ಬಿಎಂಟಿಎಫ್ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಮನೆ ಹಾಗೂ ಕಚೇರಿಯ ಮೇಲೂ ದಾಳಿ ನಡೆಸಿದಾಗ ಕೊಟ್ಯಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಸಂಬಂಧ ಇಂದು ವಿಕ್ಟರ್ ಸೈಮನ್ ಅವರನ್ನು ಅಧಿಕಾರಿಗಳು ಬಂಧಿಸಿದ್ದು, ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.

ವಿಕ್ಟರ್ ಸೈಮನ್ ಅವರ ನಿವಾಸದಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿ 1 ಫ್ಲಾಟ್, 1 ಕೋಟಿ ರೂ. ಮೌಲ್ಯದ ಬಾಂಡ್ ಪೇಪರ್, ಬ್ಯಾಂಕ್ ಲಾಕರ್ಗಳಲ್ಲಿ 500 ಗ್ರಾಂ ಚಿನ್ನ, ಬೆಂಗಳೂರಿನ ವಾಸದ ಮನೆಯಲ್ಲಿ 7.26 ಲಕ್ಷ ರೂ. ನಗದು, 21.61 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಇನ್ನು ಕೆಲ ಆಸ್ತಿಗಳು ಪತ್ತೆಯಾಗಿವೆ.

ಬಾಂಡ್ ಪೇಪರ್ ಇರಿಸಿಕೊಂಡಿದ್ದರ ಉದ್ದೇಶದ ಕುರಿತೂ ತನಿಖೆ ನಡೆಯುತ್ತಿದೆ. ಸೈಮನ್ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಈ ಕಾರಣದಿಂದ ಅವರನ್ನು ಬಂಧಿಸಲಾಗಿದೆ. ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್.ಪಿ ಕುಲದೀಪ್ ಕುಮಾರ್ ಆರ್. ಜೈನ್ ಅವರು ತಿಳಿಸಿದ್ದಾರೆ.