ದೊಡ್ಡಬಳ್ಳಾಪುರ : ಹೆಂಡತಿಗೆ ವಾರಕ್ಕೊಮ್ಮೆ ಹೋಟೆಲ್ ನಲ್ಲಿ ಊಟ ಮಾಡುವ ಆಸೆ. ಆದರೆ ಆಸೆ ಈಡೇರಿಸದ ಹಳ್ಳಿ ಗಂಡನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಎರಡು ಮಕ್ಕಳ ಜೊತೆ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಘಟನೆ ತಾಲೂಕಿನ ಎಸ್ ಎಂ ಗೊಲ್ಲಹಳ್ಳಿಯಲ್ಲಿ ನಡೆದಿದೆ. ಸಂಧ್ಯಾ (24), ಮಗಳು ಕುಸುಮಾ(4) ಹಾಗೂ ರೋಹಿತ್(2) ಆತ್ಮಹತ್ಯೆಗೆ ಶರಣಾದವರು. ಪಟ್ಟಣದಲ್ಲಿ ಬೆಳೆದಿದ್ದ ಸಂಧ್ಯಾಳಿಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹೊರಗಡೆ ಹೋಗಿ ಹೋಟೆಲ್ ನಲ್ಲಿ ಊಟ ಮಾಡುವ ಅಭ್ಯಾಸ. ಮದುವೆಯಾದ ನಂತರ ತನ್ನ ಗಂಡನಿಗೆ ಹೊರಗಡೆ ಊಟಕ್ಕೆ ಕರೆದುಕೊಂಡು ಹೋಗುವಂತೆ ನಿತ್ಯ ಹೇಳುತ್ತಿದ್ದಳು. ಆದರೆ ಹಳ್ಳಿಯವನಾದ ಶ್ರೀಕಾಂತ್, ಹೋಟೆಲ್ ಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಗಂಡನ ವರ್ತನೆಯಿಂದ ಬೇಸತ್ತ ಸಂಧ್ಯಾ, ಮನೆಯಲ್ಲಿ ಗಂಡ, ಅತ್ತೆ, ಮಾವ ಇಲ್ಲದ ಸಮಯದಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ವೇಳೆ ಮಕ್ಕಳಿಗೂ ಕೂಡ ಬೆಂಕಿ ತಗುಲಿದೆ.
ಇತ್ತ ಮನೆಯಿಂದ ಹೊಗೆ ಬರುತ್ತಿದ್ದದ್ದನ್ನು ಗಮನಿಸಿದ ನೆರೆಹೊರೆಯವರು ಬಾಗಿಲನ್ನು ತೆಗೆದು ನೋಡಿದಾಗ ಮಕ್ಕಳು ಸೇರಿದಂತೆ ತಾಯಿ ಅರ್ಧ ಬೆಂದು ಹೋಗಿದ್ದರು. ಕೂಡಲೇ ಸಂಧ್ಯಾ ಮತ್ತು ಆಕೆಯ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೂವರೂ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










