ಇಂದಿನ ಯುವಜನತೆ ಜಾನಪದ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡಲ್ಲಿ ಸುಸಂಸ್ಕೃತ, ಆದರ್ಶ ವ್ಯಕ್ತಿಗಳಾಗಿ ಬಾಳಬಹುದು: ಲಕ್ಷ್ಮಮ್ಮ ಸಿದ್ದಪ್ಪ.

51
firstsuddi

ಚಿಕ್ಕಮಗಳೂರು: ಇಂದಿನ ಯುವಜನತೆ ಜಾನಪದ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡಲ್ಲಿ ಸುಸಂಸ್ಕೃತ, ಆದರ್ಶ ವ್ಯಕ್ತಿಗಳಾಗಿ ಬಾಳಬಹುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಕ್ಷ್ಮಮ್ಮ ಸಿದ್ದಪ್ಪ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದಯ ಗಟಿಯಲ್ಲಿ ಜ.16 ರಂದು ನಡೆಯಲಿರುವ ತಾಲೂಕು ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕಡೂರಿನ ಶಾಸಕರ ಕಚೇರಿಯಲ್ಲಿ ನಿನ್ನೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಮ್ಮ ಹಿರಿಯರು ತಮ್ಮ ಶ್ರಮದ ಬದುಕಿನ ನಡುವೆ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದ್ದಾರೆ. ಅದರಲ್ಲಿ ಮಾನವ ಜನಾಂಗಕ್ಕೆ ಅಗತ್ಯವಾದ ಸಂಸ್ಕಾರ ಆದರ್ಶದ ಬದುಕಿದೆ ಎಂದರು.

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬರೀ ಅಬ್ಬರವಿದೆ. ಅದಕ್ಕೆ ಯುವಜನತೆ ಮಾರು ಹೋದರೆ ಅವರ ಬದುಕು ಸೂತ್ರ ಹರಿದ ಗಾಳಿಪಟದಂತಾಗುತ್ತದೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಜಾನಪದ ಸಮ್ಮೇಳನವನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನಡೆಸಲಾಗುವುದು ಎಂದು ತಿಳಿಸಿದರು. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಪರಿಷತ್ತಿನ ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಮಾತನಾಡಿ, ಸಮ್ಮೇಳನದ ದಿನ ವಿವಿಧ ಜಾನಪದ ಕಲಾತಂಡಗಳ ನಡುವೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಲಾಗುವುದು ಎಂದರು. ಸಮ್ಮೇಳನದಲ್ಲಿ ವಿವಿಧ ಜಾನಪದ ಗೋಷ್ಠಿಗಳು, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ, ಗಾಯನ, ನೃತ್ಯವನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಉಪಾಧ್ಯಕ್ಷರಾದ ತಿಪ್ಪೇಶ್, ಚಿಕ್ಕನಲ್ಲೂರು ಜಯಣ್ಣ, ಪ್ರಧಾನ ಕಾರ್ಯದರ್ಶಿ ಕುಂಕನಾಡು ನಾಗರಾಜ್, ಹೋಬಳಿ ಅಧ್ಯಕ್ಷ ಪರಮೇಶ್, ಸಮ್ಮೇಳನಾಧ್ಯಕ್ಷ ಓಂಕಾರಮೂರ್ತಿ, ಯಗಟಿ ಗ್ರಾ.ಪಂ.ಅಧ್ಯಕ್ಷ ಗೋವಿಂದಪ್ಪ, ನಂದೀಶ್ ಬಾಬು, ಕೀರ್ತಿಕುಮಾರ್, ಮಲಿಯಪ್ಪ ಉಪಸ್ಥಿತರಿದ್ದರು.