ಶಿವಮೊಗ್ಗ: ಮಂಗನ ಕಾಯಿಲೆಯಿಂದ 18 ವರ್ಷದ ಯುವತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಪ್ಪನಮನೆ ಗ್ರಾಮದಲ್ಲಿ ನಡೆದಿದೆ. ಆ ಮೂಲಕ ಇದು ಮಂಗನ ಕಾಯಿಲೆಗೆ ಈ ವರ್ಷ ಮೃತಪಟ್ಟ ಮೊದಲ ಪ್ರಕರಣವಾಗಿದೆ.
ಬೊಪ್ಪನೆಮನೆ ಗ್ರಾಮದ ನಿವಾಸಿ ಅನನ್ಯ ಮೃತ ಯುವತಿ. ಹೊಸನಗರದ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರ ಯುವತಿಗೆ ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಏಕಾಏಕಿ ಜ್ವರ ಉಲ್ಬಣಗೊಂಡು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಲ್ಲಿ ಕೆಎಫ್ ಡಿ (ಮಂಗನ ಕಾಯಿಲೆ) ಟೆಸ್ಟ್ ನಡೆಸಿದಾಗ ಮೊದಲ ಬಾರಿ ನೆಗೆಟಿವ್ ಬಂದಿತ್ತು. ಪುನಃ ಎರಡನೇ ಬಾರಿ ಪರೀಕ್ಷೆ ಮಾಡಿದಾಗ ಆಕೆಗೆ ಪಾಸಿಟಿವ್ ಬಂದಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಯುವತಿಯನ್ನು ಶುಕ್ರವಾರ ಸಂಜೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಯುವತಿ ಮಂಗನ ಕಾಯಿಲೆಯಿಂದಾಗಿ ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದಳು. ಹೀಗಾಗಿ, ನಿರಂತರ ಚಿಕಿತ್ಸೆ ಮುಂದುವರೆಸಿದರೂ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಯುವತಿ ಸಾವನ್ನಪ್ಪಿದ್ದಾಳೆ. ಇನ್ನು ಶಿವಮೊಗ್ಗದಲ್ಲಿ ಈವರೆಗೆ ಮೂರು ಮಂದಿಗೆ ಮಂಗನ ಕಾಯಿಲೆ ದೃಢಪಟ್ಟಿದೆ. ಅದರಲ್ಲಿ ಒಬ್ಬರು (ಯುವತಿ) ಮೃತಪಟ್ಟಿದ್ದಾರೆ.










