ಮೈಸೂರು : ಇಂದು ಮತ್ತು ನಾಳೆ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರಿಗೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ದೇವಸ್ಥಾನವನ್ನು ರಾತ್ರಿ 8 ಗಂಟೆಗೆ ಬಂದ್ ಮಾಡಲಾಗುತ್ತಿತ್ತು. ಆಯುಧಪೂಜೆ ಹಾಗೂ ವಿಜಯದಶಮಿಯಂದು ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರಿಗೆ ಅನುಕೂಲವಾಗಲೆಂದು ರಾತ್ರಿ 10ರ ವರೆಗೆ ದರ್ಶನಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಂಬೂಸವಾರಿಗೆ ಎಲ್ಲ ಸಿದ್ಧತೆ ಆಗಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸದೇ 500 ಜನರಿಗೆ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ವಿರುದ್ಧ ಸ್ವಪಕ್ಷೀಯರೇ ಮಾಡಿರುವ ಡೀಲ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಮೊದಲಿನಿಂದಲೂ ಹೇಳುತ್ತಿದ್ದೀನಿ, ಡಿ.ಕೆ ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ನೂರಕ್ಕೆ ನೂರರಷ್ಟು ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಷಡ್ಯಂತ್ರ ನಡೆಸುತ್ತಿದ್ದಾರೆ. ಯಾರನ್ನೋ ಬಲಿಪಶು ಮಾಡಲು ಷಡ್ಯಂತ್ರ ನಡೆಯುತ್ತಿದೆ. ನನಗೆ ಪರ್ಸೆಂಟೇಜ್ ವ್ಯವಹಾರ ಬಗ್ಗೆ ಗೊತ್ತಿಲ್ಲ. ಈಗಿರುವ ಕಾಂಗ್ರೆಸ್ ನಾಯಕರೇ ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.










