ಮೈಸೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಮನೆ ಯಜಮಾನಿ ಮಹಿಳೆ ಖಾತೆಗೆ ನೇರವಾಗಿ 2000 ರೂ. ಜಮೆಯಾಗಲಿದೆ. ಸದ್ಯ ಗೃಹಲಕ್ಷ್ಮೀ ಯೋಜನೆಯಲ್ಲಿ ಒಟ್ಟು ಒಂದು ಕೋಟಿ 11 ಲಕ್ಷದಷ್ಟು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 18 ಲಕ್ಷದಷ್ಡು ಫಲಾನುಭವಿಗಳ ಅರ್ಜಿಗಳಲ್ಲಿ ಟೆಕ್ನಿಕಲ್ ಸಮಸ್ಯೆಗಳು ಕಂಡುಬಂದಿವೆ. ಆಗಸ್ಟ್ 15 ರ ನಂತರ ಅರ್ಜಿ ಸಲ್ಲಿಕೆ ಮಾಡಿದ ಫಲಾನುಭವಿಗಳಿಗೆ ಮುಂದಿನ ತಿಂಗಳು ಹಣ ಜಮೆಯಾಗಲಿದೆ. ಈ ಯೋಜನೆಗೆ ಒಂದು ವರ್ಷಕ್ಕೆ 35 ಸಾವಿರ ಕೋಟಿ ವೆಚ್ಚವಾಗಲಿದೆ.
ಇಂದು ಯೋಜನೆಗೆ ಚಾಲನೆ ನೀಡಲಿರುವ ಸರ್ಕಾರ ಎಲ್ಲಾ ಖಾತೆಗಳಿಗೆ ಏಕ ಕಾಲದಲ್ಲಿ ಹಣ ಹಾಕಲು ಮುಂದಾಗಿದೆ. ಸರ್ವಸ್ ಸಮಸ್ಯೆ, ತಾಂತ್ರಿಕ ಅಡೆತಡೆ ಏನಾದರೂ ಎದುರಾದರೆ ಇನ್ನೆರಡು ದಿನದಲ್ಲಿ ಎಲ್ಲ ಫಲಾನುಭವಿಗಳ ಅಕೌಂಟ್‍ಗೆ ಹಣ ತಲುಪಲಿದೆ ಎನ್ನಲಾಗಿದೆ. ಗೃಹಲಕ್ಷ್ಮೀಯರ ಪಾಲಿನ ಹಣ ಪ್ರತಿ ತಿಂಗಳಿನ 5 ಅಥವಾ 6ನೇ ದಿನಾಂಕದಂದು ಮಹಿಳೆಯರ ಅಕೌಂಟ್‍ಗೆ ಬರುವ ಸಾಧ್ಯತೆಯಿದೆ.
ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲೆ ಅತಿ ಹೆಚ್ಚು ನಿರೀಕ್ಷೆ ಇದ್ದ ಯೋಜನೆ ಗೃಹಲಕ್ಷ್ಮೀ. ಇಂದು ಈ ಗೃಹಲಕ್ಷ್ಮೀ ಯೋಜನೆಗೆ ಅರಮನೆ ನಗರಲ್ಲಿ ಚಾಲನೆ ಸಿಗಲಿದೆ. ಯೋಜನೆ ಚಾಲನೆಗೆ ಸಾಂಸ್ಕೃತಿಕ ನಗರಿ ಶೃಂಗಾರಗೊಂಡಿದೆ.
ಮೈಸೂರಿನ ರಾಜ ಬೀದಿಗಳಲ್ಲಿ ಕಾಂಗ್ರೆಸ್ನ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ. ನಗರದೆಲ್ಲೆಡೆ ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರ ಕಟೌಟ್‌ಗಳನ್ನು ಹಾಕಲಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆಯವರು ಬಟನ್ ಒತ್ತುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಮಹಾರಾಜ ಕಾಲೇಜು ಮೈದಾನದ ಮುಖ್ಯ ವೇದಿಕೆಯ ಹಿಂದೆ 104 ಅಡಿ ಅಗಲದ ಪರದೆ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಮೈಸೂರು ಮತ್ತು ಸಮೀಪದ ಕೊಡಗು, ಹಾಸನ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಿಂದ ಸುಮಾರು 1 ಲಕ್ಷ ಮಹಿಳೆಯರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳನ್ನು ಸ್ಥಳಕ್ಕೆ ಕರೆದೊಯ್ಯಲು ಸುಮಾರು 2,000 ಬಸ್‌ಗಳನ್ನು ಬಳಸಲಾಗುತ್ತಿದೆ. ಇಂದು 12 ಗಂಟೆಗೆ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರ ಜೊತೆ ಸಿಎಂ ಚಾಲನೆ ನೀಡಲಿದ್ದು, ಎಲ್ಲಾ ಸಿದ್ದತೆಗಳು ಪೂರ್ಣವಾಗಿವೆ.
ಇನ್ನು ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಲು ಡಿಸಿಎಂ ಡಿಕೆ ಶಿವಕುಮಾರ್ ಮೈಸೂರಿನಲ್ಲೇ ವಾಸ್ತವ್ಯ ಹೂಡಿ ಕಾರ್ಯಕ್ರಮದ ರೂಪುರೇಷೆಗೆ ಕಳೆದೆರಡು ದಿನದಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯಕ್ರಮ ನಡೆಯುವ ವೇದಿಕೆಗೆ ಸಿಎಂ ಸಿದ್ದರಾಮಯ್ಯ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇದಿಕೆಯಲ್ಲಿ ಒಂದು ಲಕ್ಷ ಫಲಾನುಭವಿಗಳ ಜೊತೆ ರಾಜ್ಯದ ಪ್ರತಿ ಗ್ರಾ.ಪಂ ಕಚೇರಿ ಆವರಣದಲ್ಲಿ ಲೈವ್ ಮೂಲಕ ಕಾರ್ಯಕ್ರಮ ತೋರಿಸಲಾಗುತ್ತದೆ.
ಕಾರ್ಯಕ್ರಮ ಮುಗಿದ ಮೇಲೆ ಫಲಾನುಭವಿಗಳ ಜೊತೆ ಕೂಡ ಸಂವಾದ ನಡೆಸಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಅದರ ಡ್ರೈ ರನ್ ನಿನ್ನೆ ಮಾಡಲಾಯಿತು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗೃಹಲಕ್ಷ್ಮೀ ಕಾರ್ಯಕ್ರಮ ಹಿನ್ನೆಲೆ ಕಾರ್ಯಕ್ರಮದ ಸುತ್ತಮುತ್ತ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಬೆಳಗ್ಗೆ 8ರಿಂದ ಸಂಜೆ 6ರವರೆಗೆ ವಾಹನ ಸಂಚಾರ ನಿರ್ಬಂಧ ಹೇರಿ ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.










