ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದವರ ಮೇಲೆ ಫಾರೆಸ್ಟ್ ಗಾರ್ಡ್ ಫೈರಿಂಗ್- ಓರ್ವ ಸಾವು…

82
firstsuddi

ಆನೇಕಲ್: ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ಅರಣ್ಯ ಪ್ರದೇಶದ ಕಲ್ಕೆರೆಯಲ್ಲಿ ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದವರ ಮೇಲೆ ಫಾರೆಸ್ಟ್ ಗಾರ್ಡ್ ಫೈರಿಂಗ್ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಸಮೀಪದ ನಟ್ಟೂರಹಳ್ಳಿ ನಿವಾಸಿ ತಿಮ್ಮರಾಯಪ್ಪ(40) ಮೃತ ದುರ್ದೈವಿ. ಕಳೆದ ಕೆಲ ದಿನಗಳಿಂದ ಅರಣ್ಯದಲ್ಲಿ ಶ್ರೀಗಂಧದ ಮರಗಳು ಕಳುವಾಗಿದ್ದವು. ಈ ಹಿನ್ನೆಲೆ ಫಾರೆಸ್ಟ್ ಬೀಟ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ತಡರಾತ್ರಿ 2 ಗಂಟೆಯ ಸುಮಾರಿಗೆ ಗಂಧದ ಮರ ಕಳ್ಳತನ ಮಾಡಲು ಇಬ್ಬರು ಬಂದಿದ್ದರು. ಈ ವೇಳೆ ಬೀಟ್ ಫಾರೆಸ್ಟ್ ಗಾರ್ಡ್ ವಿನಯ್ ಫೈರಿಂಗ್ ಮಾಡಿದ್ದಾರೆ. ಇದರಿಂದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಏರಿಯಾದಲ್ಲಿ ಫಾರೆಸ್ಟ್ ಗಾರ್ಡ್ ಹಾಗೂ ಇಬ್ಬರು ವಾಚರ್ಸ್ ರೌಂಡ್ಸ್​​ನಲ್ಲಿದ್ದರು. ಈ ಜಾಗದಲ್ಲಿ ವನ್ಯ ಜೀವಿಗಳು ಹಾಗೂ ಶ್ರೀಗಂಧ ಮರಗಳು ಇರುವುದರಿಂದ ಕಳ್ಳರ ಹಾವಳಿ ಇದೆ. ಹೀಗಾಗಿ ಫಾರೆಸ್ಟ್ ವಾಚರ್ ಹಾಗೂ ಗಾರ್ಡ್ ನೈಟ್ ಪೆಟ್ರೋಲಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಮರ ಕಡಿಯುವ ಶಬ್ದ ಕೇಳಿಸಿದೆ. ಸ್ಥಳಕ್ಕೆ ಹೋಗಿ ನೋಡುತ್ತಿದ್ದಂತೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಕಳ್ಳ ಮುಂದಾಗಿದ್ದಾನೆ. ಶರಣಾಗುವಂತೆ ವಾರ್ನ್ ಮಾಡಿದರೂ, ಕೇಳದೆ ಇದ್ದಾಗ ಫೈರಿಂಗ್ ಮಾಡಿದ್ದಾರೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.