ಇಂದು ವಿಶ್ವಾಸಮತದ ಅಗ್ನಿಪರೀಕ್ಷೆ ಎದುರಿಸಲಿರುವ ಏಕನಾಥ್ ಶಿಂಧೆ.

47
firstsuddi

ಮುಂಬೈ : ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರದ ಪತನದ ನಂತರ ಜೂ. 30ರಂದು ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅವರು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಸದ್ಯ ಶಿವಸೇನೆಯ ಬಂಡಾಯಗಾರರ ಗುಂಪು, ಬಿಜೆಪಿ ಮತ್ತು ಪಕ್ಷೇತರ ಶಾಸಕರ ಬೆಂಬಲ ಹೊಂದಿರುವ ಏಕನಾಥ ಶಿಂಧೆ ಸುಲಭವಾಗಿ ಬಹುಮತ ಸಾಬೀತು ಪಡಿಸಲಿದ್ದಾರೆ.

ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ರಾಹುಲ್ ನರ್ವೇಕರ್ ವಿಧಾನಸಭಾ ಸ್ಪೀಕರ್ ಆಗಿ ಶನಿವಾರ ಆಯ್ಕೆಯಾಗಿದ್ದಾರೆ. ಇದು ಕೂಡ ಏಕನಾಥ್ ಶಿಂಧೆ ಬಹುಮತ ಸಾಬೀತು ಪಡಿಸಲು ಪೂರಕವಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರ ವಿಧಾನಸಭೆಯು ಒಟ್ಟು 288 ಶಾಸಕರನ್ನು ಹೊಂದಿದ್ದು ಬಹುಮತ ಸಾಬೀತು ಪಡಿಸಲು ಅಗತ್ಯ ಇರುವ ಶಾಸಕರ ಸಂಖ್ಯೆ 145 ಆಗಿದೆ. ಬಿಜೆಪಿ 106 ಮತ್ತು ಬಂಡಾಯ ಶಿವಸೇನೆಯ ಬಣದ 39, ಸ್ವತಂತ್ರ ಅಭ್ಯರ್ಥಿಗಳು ಸೇರಿ ನೂತನ ಮುಖ್ಯಮಂತ್ರಿ ಶಿಂದೆಗೆ 164 ಶಾಸಕರ ಬಲವಿದೆ. ಈ ಮೂಲಕ ಏಕನಾಥ ಶಿಂಧೆ ಬಹಳ ಸುಲಭವಾಗಿ ಬಹುಮತ ಸಾಬೀತುಪಡಿಸಬಹುದಾಗಿದೆ. ವಿಪಕ್ಷಗಳಾದ ಉದ್ಧವ್ ಠಾಕ್ರೆ ಬಣ, ಎನ್ ಸಿಪಿ, ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳು 112 ಸದಸ್ಯರಿದ್ದಾರೆ.