ಬೆಂಗಳೂರು: ಇದೇ ಮೊದಲ ಬಾರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುರಕ್ಷಿತವಾಗಿ ಹೊಸ ವರ್ಷದ ಆಚರಣೆ ಮಾಡಿರುವುದಕ್ಕೆ ಗೃಹ ಸಚಿವ ಜಿ ಪರಮೇಶ್ವರ ಅವರು ಸಾರ್ವಜನಿಕರಿಗೆ ಮತ್ತು ಪೊಲೀಸ್ ಸಿಬ್ಬಂದಿಯವರಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ವಿಪಕ್ಷ ನಾಯಕರಿಗೆ ಕರೆ ನೀಡಿದರು. ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಕಳೆದ ರಾತ್ರಿ ಲಕ್ಷಾಂತರ ನಾಗರಿಕರು, ಯುವಕರು ಹೊಸ ವರ್ಷದ ಆಚರಣೆಯಲ್ಲಿ ಪಾಲ್ಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಯಾವುದೇ ಅಹಿತಕರ ಘಟನೆಗಳ ವರದಿ ತಿಳಿದುಬಂದಿಲ್ಲ. ಮೊದಲ ಬಾರಿಗೆ ಹೊಸ ವರ್ಷಾಚರಣೆಯು ಸುಗಮವಾಗಿ ನಡೆದಿದೆ ಎಂದು ಹೇಲಿದರು. ಪೊಲೀಸ್ ಇಲಾಖೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರು ಮತ್ತು ಯುವ ಪೀಳಿಗೆ ಕೂಡ ಶಾಂತಿಯುತವಾಗಿ ಹೊಸ ವರ್ಷಾಚರಣೆ ಮಾಡಿತು. ಇದಕ್ಕಾಗಿ ಅವರಿಗೆ ನನ್ನ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ವರ್ಷ ವಿರೋಧ ಪಕ್ಷದ ನಾಯಕರು ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು. ನಾವು ಕರ್ನಾಟಕವನ್ನು ಎಲ್ಲ ಸಮುದಾಯಗಳ ಶಾಂತಿಯ ತೋಟವಾಗಿ ಮಾಡಿದ್ದೇವೆ. ಅಭಿವೃದ್ಧಿಯ ದೃಷ್ಟಿಕೋನದಿಂದ ವಿರೋಧ ಪಕ್ಷಗಳು ನಮ್ಮನ್ನು ಬೆಂಬಲಿಸಿದರೆ, ಅದು ಪ್ರಯೋಜನಕಾರಿಯಾಗುತ್ತದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟುಬಿಡಬೇಕು ಎಂದು ನಾನು ಸೂಚಿಸುತ್ತಿಲ್ಲ. ಆದರೆ, ಸರ್ಕಾರವನ್ನು ರಚನಾತ್ಮಕವಾಗಿ, ಜವಾಬ್ದಾರಿಯುತವಾಗಿ ಎಚ್ಚರಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.










