ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ…

66
firstsuddi

ಟೆಹ್ರಾನ್ : ಇರಾನ್‌ನ ಕೋಮ್ ನಗರದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ವಿಷವುಣಿಸಿದ ಘಟನೆ ವರದಿಯಾಗಿದೆ.

2022ರ ನವೆಂಬರ್ ಅಂತ್ಯದ ವೇಳೆಗೆ ಟೆಹ್ರಾನ್ ನ ದಕ್ಷಿಣದ ಕೋಮ್ ನಲ್ಲಿ ಶಾಲಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿದೆ. ಮಕ್ಕಳ ಉಸಿರಾಟದಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾಗಿದ್ದು, ಈಗ ಆರೋಗ್ಯ ಸಚಿವ ಯುನೆಸ್ ಪನಾಹಿ, ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಕೋಮ್ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷಪ್ರಾಶನದ ನಂತರ, ಹಲವು ಮಂದಿ ಎಲ್ಲಾ ಶಾಲೆಗಳನ್ನು, ವಿಶೇಷವಾಗಿ ಬಾಲಕಿಯರ ಶಾಲೆಗಳನ್ನು ಮುಚ್ಚಬೇಕೆಂದು ಒತ್ತಾಯಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳ ಪೋಷಕರು ಫೆ.14ರಂದು ನಗರದ ಗವರ್ನರೇಟ್ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ. ಗುಪ್ತಚರ ಮತ್ತು ಶಿಕ್ಷಣ ಸಚಿವಾಲಯಗಳು ವಿಷದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರ, ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು. ಡಿಸೆಂಬರ್ 16 ರಿಂದ ಇರಾನ್ ಪ್ರತಿಭಟನೆಗಳಿಂದ ತತ್ತರಿಸಿ ಹೋಗಿದೆ, ಇನ್ನೊಂದೆಡೆ ವಿದ್ಯಾರ್ಥಿನಿಯರಿಗೆ ವಿಷವುಣಿಸಿದ ಘಟನೆಯು ತೀವ್ರ ಆತಂಕಕ್ಕೆ ಕಾರಣವಾಗಿದೆ.