ತುಮಕೂರು : ಮಹಿಳಾ ಪಿಎಸ್ ಐ ಜೊತೆ ಅಸಭ್ಯ ವರ್ತನೆ, ಅವಾಚ್ಯ ಶಬ್ದದಿಂದ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆಯನ್ನು ಪೊಲೀಸರು ಬಂಧಿಸಿದ್ದಾರೆ.
ಫೆ.20 ರಂದು ತುಮಕೂರು ನಗರದಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ವಿರುದ್ಧ, ಅವರ ಭಾವಚಿತ್ರ ಇರುವ ಪೋಸ್ಟರ್ ಗಳ ಮೇಲೆ ಪೇ ಎಂಎಲ್ ಎ ಪೋಸ್ಟರ್ ಅಂಟಿಸಿದ್ದರು. ಈ ಸಂಬಂಧ ನಾಲ್ವರನ್ನು ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ವಶಕ್ಕೆ ಪಡೆದ ನಾಲ್ವರು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಶಶಿ ಹುಲಿಕುಂಟೆ ಪೊಲೀಸರಿಗೆ ಧಮ್ಕಿ ಹಾಕಿದ್ದಾನೆ. ಬಿಡಲು ಸಾಧ್ಯ ಇಲ್ಲ ಎಂದಾಗ 3 ತಿಂಗಳ ಬಳಿಕ ನಮ್ಮ ಸರ್ಕಾರ ಬರುತ್ತೆ ಆಗ ನಿಮ್ಮನ್ನೆಲ್ಲ ನೋಡಿಕೊಳ್ಳುತ್ತೇನೆ ನಿಮ್ಮನ್ನು, ಸಸ್ಪೆಂಡ್ ಮಾಡಿಸುತ್ತೇನೆ ಅಂತ ಮನಬಂದಂತೆ ಅವಾಜ್ ಹಾಕಿದ್ದಾನೆ.
ಈ ವೇಳೆ ಶಶಿ ಹುಲಿಕುಂಟೆ ಮಾತಿಗೆ ಮಹಿಳಾ ಪಿಎಸ್ಐ ರತ್ನಮ್ಮ ಪ್ರತಿರೋಧ ಒಡ್ಡಿದಾಗ, ಪಿಎಸ್ಐ ಜೊತೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಠಾಣೆಯಲ್ಲಿದ್ದ 4 ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರಿಗೆ ಯಾಮಾರಿಸಿ ಎಸ್ಕೇಪ್ ಮಾಡಿದ್ದಾನೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಶಶಿ ಹುಲಿಕುಂಟೆಯನ್ನು ಐಪಿಸಿ ಸೆಕ್ಸನ್- 353, 507ರ ಅಡಿ ಬಂಧಿಸಿ 3ನೇ ಹೆಚ್ಚುವರಿ ಜೆಎಮ್ ಎಫ್ ಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.










