ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಎಂಟು ಮಂದಿ ಸಾವು…

54
firstsuddi

ಕೀವ್ : ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಭೀಕರ ಕ್ಷಿಪಣಿ ದಾಳಿ ನಡೆಸಿದ್ದು, ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 24 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕನಿಷ್ಠ ನಾಲ್ಕು ಕ್ಷಿಪಣಿಗಳು ಇಂದು ಬೆಳಗ್ಗೆ ಕೀವ್ ಮೇಲೆ ಬಿದ್ದಿವೆ ಎಂದು ವರದಿಯಾಗಿದೆ. ಇದಕ್ಕೂ ಮೊದಲು, ರಷ್ಯಾ ಝಪೋರಿಜ್ಜ್ಯಾ ಮತ್ತು ಬಂದರು ನಗರವಾದ ಮೈಕೊಲೈವ್ ಮೇಲೆ ಕ್ಷಿಪಣಿಗಳಿಂದ ದಾಳಿ ನಡೆಸಿತ್ತು.

ಇಂದು ಬೆಳಗ್ಗೆ ಉಕ್ರೇನ್ ನಲ್ಲಿ ನಡೆದ ದಾಳಿಯ ನಂತರ ಸಾವು-ನೋವುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್ ನ ಪಶ್ಚಿಮ ಪ್ರದೇಶವಾದ ಎಲ್ವಿವ್ ನಲ್ಲಿ ಇಂಧನ ಸೌಲಭ್ಯಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ರಷ್ಯಾ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ.

ಕೀವ್ ನಗರದಲ್ಲಿ ಭಾರೀ ಪ್ರಮಾಣದ ಸ್ಪೋಟದ ಸದ್ದು, ಹೊಗೆ, ಧೂಳು ಹಾಗೂ ಬೆಂಕಿ ತುಂಬಿಕೊಂಡಿದೆ. ಇದರಿಂದಾಗಿ ಕೀವ್ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸದ್ಯ ಉಕ್ರೇನ್ ವಿರುದ್ಧ ರಷ್ಯಾ ನಡೆಸಿದ ದಾಳಿಯ ಭಯಾನಕ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕನಸಿನ ಕ್ರಿಮಿಯಾ – ರಷ್ಯಾ ಸಂಪರ್ಕಿಸುವ ಕ್ರಿಮಿಯಾ ಸೇತುವೆಯನ್ನು ಉಕ್ರೇನ್ ಉಡೀಸ್ ಮಾಡಿತ್ತು. ಉಕ್ರೇನ್ ನ ಭಯೋತ್ಪಾದಕ ಕೃತ್ಯ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಖಂಡಿಸಿದ್ದರು. ಇದೀಗ ಡೆಡ್ಲಿ ರಾಕೆಟ್ ದಾಳಿ ಮಾಡುವ ಮೂಲಕ ರಷ್ಯಾ ಸೇಡು ತೀರಿಸಿಕೊಂಡಿದೆ.