ಉಡುಪಿ : ಆಗತಾನೆ ಜನಿಸಿದ ಹೆಣ್ಣು ಮಗುವನ್ನು ಕಸದ ಬುಟ್ಟಿಗೆ ಎಸೆದುಹೋದ ಪಾಪಿ ತಾಯಿ…

178
firstsuddi

ಉಡುಪಿ : ಆಗತಾನೆ ಜನಿಸಿದ ನವಜಾತ ಹೆಣ್ಣು ಶಿಶುವನ್ನು ಪಾಪಿ ತಾಯಿಯೊಬ್ಬರು ಕಸದ ಬುಟ್ಟಿಗೆ ಎಸೆದು ಹೋಗಿರುವ ಮನಕಲುಕುವ ಘಟನೆ ನಗರದ ಚಿತ್ತರಂಜನ್ ಸರ್ಕಲ್ ಬಳಿ ನಡೆದಿದೆ.
ಇಂದು ಬೆಳಿಗ್ಗೆ ನಗರಸಭೆಯ ಪೌರ ಕಾರ್ಮಿಕರೊಬ್ಬರು ನಗರ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಮಗು ಅಳುತ್ತಿದ್ದ ಶಬ್ಧ ಕೇಳಿಸಿದ್ದು, ಕೂಡಲೇ ಪೌರ ಕಾರ್ಮಿಕ ಕಸದ ಬುಟ್ಟಿಯಲ್ಲಿ ಪರಿಶೀಲಿಸಿದಾಗ ಹೆಣ್ಣು ಮಗುವೊಂದು ಇರುವುದು ಪತ್ತೆಯಾಗಿದೆ. ಕೂಡಲೇ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ನಿತ್ಯಾನಂದ ಅವರು ಮಗುವನ್ನು ಉಡುಪಿ ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದು, ಮಗುವಿಗೆ ವೈದ್ಯರಿಂದ ಆರೈಕೆ ನಡೆಯುತ್ತಿದ್ದು, ಮಗು ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಉಡುಪಿ ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.