ಡೆಹ್ರಾಡೂನ್: ಇಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕನಂದಾ ನದಿ ತೀರದಲ್ಲಿ ನಮಾಮಿ ಗಂಗೆ ಯೋಜನೆಯ ನಿರ್ಮಾಣ ಹಂತದಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕದಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡು ಸುಮಾರು 15 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಘಟನೆಯಲ್ಲಿ ವಿದ್ಯುತ್ ಸ್ಪರ್ಶಕ್ಕೆ 20ರಿಂದ 25 ಜನರು ಪ್ರಾಣ ಕಳೆದುಕೊಂಡ ಶಂಕೆ ವ್ಯಕ್ತವಾಗಿದೆ. ಈ ಘಟನೆ ಭಾರೀ ಭೀಕರವಾಗಿದ್ದು, ಕೆಲ ದೇಹಗಳು ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳದಲ್ಲೇ ಕಾರ್ಯಾಚರಣೆ ನಡೆಸುತ್ತಿವೆ. ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.
ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರೂ ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.










