ಅಹಮದಾಬಾದ್: ಜಾಗ್ವಾರ್ ಕಾರು ಚಾಲಕನ ಹುಚ್ಚಾಟಕ್ಕೆಇಬ್ಬರು ಪೊಲೀಸರು ಸೇರಿದಂತೆ 9 ಮಂದಿ ಬಲಿಯಾಗಿರುವ ಘಟನೆ ಸರ್ಖೇಜ್-ಗಾಂಧಿನಗರ ಹೆದ್ದಾರಿಯ ಇಸ್ಕಾನ್ ದೇವಸ್ಥಾನದ ಬಳಿಯ ಮೇಲ್ಸೇತುವೆಯಲ್ಲಿ ನಡೆದಿದೆ.
ಪೊಲೀಸರು ಹಂಚಿಕೊಂಡ ವಿವರಗಳ ಪ್ರಕಾರ, ತಡರಾತ್ರಿ 1.30 ಗಂಟೆಗೆ ಇಸ್ಕಾನ್ ಫ್ಲೈಓವರ್‌ನಲ್ಲಿ ಮಹೀಂದ್ರ ಥಾರ್ ವಾಹನವು ಡಂಪರ್ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಂತುಕೊಂಡು ಅಪಘಾತಗೊಂಡಿದ್ದ ವಾಹನಗಳನ್ನು ವೀಕ್ಷಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಜಾಗ್ವಾರ್ ಕಾರು ನಿಂತಿದ್ದವರ ಮೇಲೆ ಹರಿದಿದೆ. ಪರಿಣಾಮ ಇಬ್ಬರು ಪೊಲೀಸರು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ಕರೆತರಲಾಗಿದ್ದ ಒಟ್ಟು 12 ಮಂದಿಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೋಲಾ ಸಿವಿಲ್ ಆಸ್ಪತ್ರೆಯ ವೈದ್ಯಾಧಿಕಾರಿ ಕೃಪಾ ಪಟೇಲ್ ತಿಳಿಸಿದ್ದಾರೆ.
ಆರೋಪಿ ಕಾರು ಚಾಲಕನಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತ ನಡೆದಾಗ ಐಷಾರಾಮಿ ಜಾಗ್ವಾರ್ ಕಾರು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತಿತ್ತು ಎಂದು ವರದಿಯಾಗಿದೆ. ಪೊಲೀಸರು ಹಿಟ್ ಅಂಡ್ ರನ್ ಅಡಿ ಪ್ರಕರಣ ದಾಖಲಿಸಿದ್ದಾರೆ.










