ಡೆಹ್ರಾಡೂನ್: ಉದ್ಯಮಿಯೊಬ್ಬರನ್ನು ನಾಗರ ಹಾವಿನಿಂದ ಕಚ್ಚಿಸಿ ಕೊಲೆಗೈದ ಆರೋಪದ ಮೇಲೆ ಹಾವಾಡಿಗನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಇನ್ನೂ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಹಾವಾಡಿಗ ರಮೇಶ್‍ನಾಥ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಡಾಲಿ ಆರ್ಯ ಹಾಗೂ ಆಕೆಯ ಸ್ನೇಹಿತ ದೀಪ್ ಕಂಡ್ಪಾಲ್ ಎಂಬುವವರು ಆರೋಪಿಗಳಾಗಿದ್ದು ಇವರಿಗೆ ಕುಟುಂಬಸ್ಥರು ಸಹಕರಿಸಿದ್ದಾರೆ. ಈಗ ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 15 ರಂದು ತೀನ್‍ಪಾನಿ ಪ್ರದೇಶದ ಬಳಿ ಉದ್ಯಮಿ ಅಂಕಿತ್ ಚೌವ್ಹಾಣ್ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಮಾಹಿತಿಗಳನ್ನು ದಾಖಲಿಸಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಹಾವಿನ ವಿಷ ಸೇರಿ ಮೃತಪಟ್ಟಿದ್ದು ತಿಳಿದು ಬಂದಿತ್ತು. ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಡಾಲಿ ಎಂಬ ಮಹಿಳೆಯೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿತ್ತು.
ಬಳಿಕ ಮಹಿಳೆಯ ಕರೆಯ ವಿವರಗಳನ್ನು ಆಧರಿಸಿ ಆಕೆಯ ಫೋನ್ ನನ್ನು ಟ್ರ್ಯಾಕ್ ಮಾಡಲಾಗಿದೆ. ಈ ವೇಳೆ ಮಹಿಳೆ ಹಾವಾಡಿಗನೊಂದಿಗೆ ಸಂಪರ್ಕಿಸಿರುವುದು ತಿಳಿದು ಬಂದಿದೆ. ಅಲ್ಲದೇ ಆರಂಭದಲ್ಲಿ ಕಾರಿನಲ್ಲಿ ವಿಷಾನಿಲ ಹೊರ ಸೂಸುವಿಕೆಯಿಂದ ಈ ಸಾವು ಸಂಭವಿಸಿದೆ ಎಂದು ಊಹಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ನಂತರ ತನಿಖೆಯ ದಾರಿ ಬದಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ನೈನಿತಾಲ್ ಪಂಕಜ್ ಭಟ್ ತಿಳಿಸಿದ್ದಾರೆ.
ಡಾಲಿಗೆ ಅಂಕಿತ್ ಮದ್ಯಪಾನದ ಅಮಲಿನಲ್ಲಿ ನಿಂದಿಸುತ್ತಿದ್ದ ಇದಕ್ಕಾಗಿ ಕೊಲೆಗೈಯಲಾಗಿದೆ. ಅಲ್ಲದೇ ಆತ ಅಮಲಿನಲ್ಲಿದ್ದಾಗ ಈ ಕೃತ್ಯ ಎಸಗಿದ್ದಾಗಿ ಬಂಧಿತ ಆರೋಪಿ ಹೇಳಿದ್ದಾನೆ. ಇತ್ತ ಮಾಹಿ ಅಲಿಯಾಸ್ ಡೋಲಿ ಆರ್ಯ, ಈಕೆಯ ಆಪ್ತರು ಸೇರಿದಂತೆ ಐವರ ಮೇಲೆ ಪ್ರಕರಣ ದಾಖಲಾಗಿದೆ. ಇದೀಗ ಈ ಆರೋಪಿಗಳು ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.










