ಎರಡನೇ ಹೆಂಡತಿಯ ಮಾತು ಕೇಳಿ ತನ್ನ ಮಕ್ಕಳ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದ ಪಾಪಿ ತಂದೆ ಅರೆಸ್ಟ್!

92
firstsuddi

ಬೆಂಗಳೂರು : ಎರಡನೇ ಹೆಂಡತಿಯ ಮಾತು ಕೇಳಿ ತನ್ನ ಸ್ವಂತ ಮಕ್ಕಳ ಮೇಲೆ ಪಾಪಿ ತಂದೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ನಗರದ ಜೆ.ಪಿ. ನಗರದಲ್ಲಿ ನಡೆದಿದೆ.

ಪಾಪಿ ತಂದೆಯನ್ನು ಸೆಲ್ವಾ ಎಂದು ಗುರುತಿಸಲಾಗಿದೆ. ಸೆಲ್ವಾ ಮೊದಲ ಪತ್ನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸತ್ಯ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿಗೆ ಮೂವರು ಮಕ್ಕಳಿದ್ದರು. ಸೆಲ್ವಾ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದಂತೆ ಸತ್ಯಾ ಮಕ್ಕಳ ಮೇಲೆ ಗಂಡನಿಗೆ ಚಾಡಿ ಹೇಳುತ್ತಿದ್ದಳು. ಇದರಿಂದ ಕೋಪಗೊಂಡ ಸೆಲ್ವಾ ದೋಸೆ ಎತ್ತುವ ಮೊಗಚೆ ಕೈನಿಂದ ಮಕ್ಕಳಿಗೆ ಬರೆ ಎಳೆದಿದ್ದ. ನೋವನ್ನು ಸಹಿಸಲಾಗದೆ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಪಾಪಿ ತಂದೆ ಸೆಲ್ವಾ ಹಾಗೂ ಸತ್ಯ ಇಬ್ಬರನ್ನು ಕೂಡ ಬಂಧಿಸಲಾಗಿದೆ.

ಮೂರು ಮಕ್ಕಳ ಪೈಕಿ ಇಬ್ಬರು ಮಕ್ಕಳಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದು, ಮಕ್ಕಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಇನ್ನು ಪೊಲೀಸರ ಬಳಿ ಅಳುತ್ತಲೇ ಮಕ್ಕಳು ತಮ್ಮ ಹೇಳಿಕೆ ದಾಖಲಿಸಿದ್ದು, ‘ಭಿಕ್ಷೆ ಬೇಡಲು ಕಳುಹಿಸುತ್ತೀನಿ ಎಂದು ಅಮ್ಮ ಹೇಳ್ತಿದ್ರು. ಅಮ್ಮನ ಮಾತು ಕೇಳಿ ಅಪ್ಪಾನೂ ಹೊಡೀತಿದ್ರು. ನಮಗೆ ಮಲಗಲು ಜಾಗವನ್ನೂ ಕೊಡುತ್ತಿರಲಿಲ್ಲ. ಪ್ರತೀ ದಿನ ಹೋಡೆಯುತ್ತಿದ್ರು, ಅಮ್ಮ ಜಾಸ್ತಿ ಹೊಡೆಯುತ್ತಾಳೆ ಎಂದು ಪೊಲೀಸರಿಗೆ ಮಕ್ಕಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.