ಎರಡು ಕಾರುಗಳು ಮುಖಾಮುಖಿ ಡಿಕ್ಕಿ- ಐವರ ದುರ್ಮರಣ…

62
firstsuddi

ತೆಲಂಗಾಣ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಒಂದು ಕರ್ನಾಟಕಕ್ಕೆ ಸೇರಿದ ಕಾರು ಮತ್ತು ಒಂದು ಮಹಾರಾಷ್ಟ್ರಕ್ಕೆ ಸೇರಿದ ಕಾರು ಮುಖಾಮಖಿ ಡಿಕ್ಕಿ ಹೊಡೆದಿವೆ. ಮೃತರನ್ನು ಯಾದಗಿರಿ ಜಿಲ್ಲೆಯ ಸೈದಾಪುರದ ಮೌಲಾಲಿ, ಖಲೀಲ್, ಬಸಮ್ಮ ಮತ್ತು ಮಹಾರಾಷ್ಟ್ರ ಮೂಲದ ತಾಯಿ ಪ್ರಬೀತಾ(35), ಪುತ್ರಿ ಅಸ್ಮಿತಾ(7) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಮಕ್ತಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಪಘಾತದ ನಂತರ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಜಖಂಗೊಂಡಿದ್ದ ಕಾರುಗಳನ್ನು ಪೊಲೀಸರು ರಸ್ತೆ ಬದಿಗೆ ಸ್ಥಳಾಂತರ ಮಾಡಿ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟಿದ್ದಾರೆ.

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಅಪಘಾತದ ಕುರಿತು ಹೆಚ್ಚಿನ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.