ಸಿನಿಮಾ ಶೈಲಿಯಲ್ಲಿ ಕಿ.ಮೀ.ಗಟ್ಟಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ…

54
firstsuddi

ಬೆಂಗಳೂರು: ಸಿನಿಮಾ ಶೈಲಿಯಲ್ಲಿ ಕಿಲೋಮೀಟರ್‌ಗಟ್ಟಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಲಕ್ಕಸಂದ್ರದಲ್ಲಿ ನಡೆದಿದೆ.

ಹತ್ಯೆಯಾದವನನ್ನು ಜೈಪ್ರಕಾಶ್ ಅಲಿಯಾಸ್ ಅಪ್ಪಿ ಎಂದು ಗುರುತಿಸಲಾಗಿದೆ. ಹತ್ಯೆಯಾದ ಜೈಪ್ರಕಾಶ್ ಲಕ್ಕಸಂದ್ರ ಬಸ್ ನಿಲ್ದಾಣದ ಬಳಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿಯ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಈ ವೇಳೆ ನಾಲ್ಕೈದು ಜನ ಆತನನ್ನು ಗಮನಿಸಿದ್ದು, ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಈ ವೇಳೆ ಆತ ತಪ್ಪಿಸಿಕೊಳ್ಳಲು ಓಡಿ ಹೋಗಿದ್ದು, ಹೋಟೆಲ್ ಒಳಗೆ ಹೋಗಿದ್ದಾನೆ.

ಆದರೂ, ಅಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ರಕ್ಷಣೆಗೆ ಬಂದವರ ಮೇಲೆಯೂ ಮಾರಕಾಸ್ತ್ರಗಳನ್ನು ಬೀಸಲು ಮುಂದಾಗಿದ್ದಾರೆ. ಇದರಿಂದ ಸಾರ್ವಜನಿಕರು ಹೆದರಿ ಜೈ ಪ್ರಕಾಶ ಪ್ರಾಣ ರಕ್ಷಣೆಗೆ ಬೇಡಿಕೊಂಡರೂ ಸಹಾಯ ಮಾಡಲು ಹಿಂದೇಟು ಹಾಕಿದ್ದಾರೆ. ಪುನಃ ಅಲ್ಲಿಂದ ಜೈಪ್ರಕಾಶ್ ಓಡಿ ಹೋದರೂ ಬಿಡದೇ ಹಿಂಬಾಲಿಸಿ ಹೋಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಇನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಗಳು ಅಲ್ಲಿಂದ ಪರಾರಿ ಆಗಿದ್ದಾರೆ. ಇನ್ನು ಜೈ ಪ್ರಕಾಶ್ ಕೂಡ ಕ್ರಿಮಿನಲ್ ಹಿನ್ನೆಲೆಯುಳ್ಳವನು ಎಂದು ಹೇಳಲಾಗುತ್ತಿದೆ. 2009ರಲ್ಲಿ ಕೊಲೆ ಕೇಸ್ ಒಂದರಲ್ಲಿ ಜೈಲಿಗೆ ಹೋಗಿ ಬಂದಿದ್ದನು. ಹಳೆ ದ್ವೇಷ ಹಿನ್ನೆಲೆ ಕೊಲೆ ನಡೆದಿರೋ ಶಂಕೆಯಿದೆ.

ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಇದೇ ವೇಳೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.