ಎರಡು ಪ್ರತ್ಯೇಕ ಶಾಲಾ ವಾಹನ ಅಪಘಾತ – ವೃದ್ಧೆ ಸಾವು…

78
firstsuddi

ಕಾರವಾರ : ಚಾಲಕನ ಅಜಾಗರೂಕತೆಯಿಂದ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಮತ್ತು ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ವಾಹನ ಅಪಘಾತಕ್ಕೀಡಾಗಿದ್ದು, ಓರ್ವ ವೃದ್ಧೆಯೊಬ್ಬರು ಸಾವಪ್ಪಿದ್ದಾರೆ.

ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲು ಘಟ್ಟದಲ್ಲಿ ಕೆಟ್ಟು ನಿಂತಿದ್ದ ಟ್ಯಾಂಕರ್ ಗೆ ಶಾಲಾ ವಾಹ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿದಂತೆ ಸುಮಾರು 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹುಬ್ಬಳ್ಳಿಯ ಸೈಂಟ್ ಅಂಥೋನಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹುಬ್ಬಳಿಯಿಂದ ಅಂಕೋಲಾ ಮಾರ್ಗವಾಗಿ ಸುಂಕಸಾಳದತ್ತ ಪ್ರವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ಓವರ್ ಟೇಕ್ ಮಾಡಲು ಹೋಗಿ ಕೆಟ್ಟು ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಬುಗುಡಿಕೊಪ್ಪದ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ 766E ರಲ್ಲಿ ಪ್ರವಾಸಕ್ಕೆ ತೆರಳಿದ್ದ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು 7 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ದುರಂತದಲ್ಲಿ ಕಸ್ತೂರಮ್ಮ (60) ಅವರು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಬನವಾಸಿಯ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಗೆ ರವಾನೆ ಮಾಡಲಾಗಿದೆ. ರಾಣಿ ಬೆನ್ನೂರಿನ ಪರಿಣಿತಿ ವಿದ್ಯಾ ಮಂದಿರದ ಶಾಲೆಯವರು, ರಾಣಿ ಬೆನ್ನೂರಿನ ಸಿದ್ಧಾರೂಢ ನಗರದಿಂದ ಶಿರಸಿಯತ್ತ ಮಕ್ಕಳನ್ನು ಪ್ರವಾಸಕ್ಕೆ ಕರೆತರುತ್ತಿದ್ದರು. ಈ ಸಂಬಂಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.