ಎಲ್ಲಾ ಶಾಲೆಗಳಲ್ಲಿ ಭಾರತ ಸೇವಾದಳದ ಘಟಕ ತೆರೆಯಬೇಕು : ರಂಗನಾಥ ಸ್ವಾಮಿ.

109
firstsuddi

ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ಶಿಸ್ತು ಸೇವಾ ಮನೋಭಾವ ಭಾವೈಕ್ಯತೆ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಭಾರತ ಸೇವಾದಳದ ಘಟಕಗಳನ್ನು ತೆರೆಯಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗನಾಥ ಸ್ವಾಮಿ ಸೂಚಿಸಿದರು.

ಭಾರತ ಸೇವಾದಳದ ಜಿಲ್ಲಾ ಮತ್ತು ತಾಲೂಕು ಘಟಕ ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಐ.ಡಿ.ಎಸ್.ಜಿಕಾಲೇಜಿನ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಶಿಕ್ಷಕರ ತರಬೇತಿ ಶಿಬಿರಕ್ಕೆ ನಿನ್ನೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶ ಇಂದು ಸಾಕ್ಷರತೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ಆದರೆ, ನಮ್ಮ ಮಕ್ಕಳು ಮತ್ತು ಯುವ ಜನತೆಯಲ್ಲಿ ಶಿಸ್ತು, ಸೇವಾ ಮನೋಭಾವ ಭಾವೈಕ್ಯತೆ, ದೇಶಭಕ್ತಿ ಮತ್ತುರಾಷ್ಟ್ರ ಪ್ರೇಮ ಕಣ್ಮರೆಯಾಗಿದೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ವಿಷಾದಿಸಿದರು.

ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳಲ್ಲೂ ಭಾರತ ಸೇವಾದಳದ ಶಾಖೆಗಳನ್ನು ತೆರೆಯುವುದರಿಂದ ಮಕ್ಕಳಲ್ಲಿ ಶಿಸ್ತು, ಸೇವಾ ಮನೋಭಾವ, ಭಾವೈಕ್ಯತೆ, ದೇಶಪ್ರೇಮ, ರಾಷ್ಟ್ರಭಕ್ತಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಈ ಹಿನ್ನೆಲೆಯಲ್ಲಿ ಭಾರತ ಸೇವಾದಳದ ಪದಾಧಿಕಾರಿಗಳು ಮತ್ತು ಅಧಿಕಾರಿಗಳು ಎಲ್ಲಾ ಶಾಲೆಗಳ ಮನವೊಲಿಸಿ ಅಲ್ಲಿ ಕಡ್ಡಾಯವಾಗಿ ಭಾರತ ಸೇವಾದಳದ ಘಟಕಗಳನ್ನು ಆರಂಭಿಸಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಎಲ್ಲಾ ಶಾಲೆಗಳಲ್ಲೂ ಭಾರತ ಸೇವಾದಳದ ಘಟಕಗಳನ್ನು ತೆರೆಯಲು ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಐ.ಬಿ.ಶಂಕರ್ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸೇವಾಮನೋಭಾವವನ್ನು ಕಲಿಸುವವರು ಶಿಕ್ಷಕರು ಹಾಗಾಗಿ ಅವರಿಗೆತರಬೇತಿ ನೀಡುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಎಸ್.ವಿ.ಬಸವರಾಜಪ್ಪ ಒಂದು ವಾರ ಕಾಲ ನಡೆಯಲಿರುವ ಶಿಬಿರದಲ್ಲಿ ಎಲ್ಲಾ ಶಿಕ್ಷಕರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ, ಖಜಾಂಚಿ ಜಗದೀಶಾಚಾರ್, ತಾಲೂಕು ಉಪಾಧ್ಯಕ್ಷ ಸಿ.ಸಿ.ಈರೇಗೌಡ, ತಾಲೂಕು ಮಾಜಿ ಅಧ್ಯಕ್ಷ ಬಿ.ಆರ್.ಜಗದೀಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಜ್ಞಾನಮೂರ್ತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಛಲವಾದಿ ಸೇವಾದಳ ಜಿಲ್ಲಾ ಸಮಿತಿ ಸದಸ್ಯರಾದ ಜಯಣ್ಣ, ಬಸವರಾಜ್ ಉಪಸ್ಥಿತರಿದ್ದರು.