ರಾಜ್‍ಕೋಟ್‍ನಲ್ಲಿ ನಡೆಯುತ್ತಿರುವ ಐಲೆರ್ಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಏಕದಿನ ಇತಿಹಾಸದಲ್ಲೇ ಬೃಹತ್ ಮೊತ್ತ ಕಲೆಹಾಕಿದ ದಾಖಲೆ ಬರೆದಿದೆ. ಆರಂಭಿಕ ಆಟಗಾರ್ತಿಯಾರದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಅವರ ಸ್ಫೋಟಕ ಶತಕ ಹಾಗೂ ರಿಚಾ ಘೋಷ್ ಅವರ ಅರ್ಧಶತಕದ ನೆರವಿನಿಂದ ಭಾರತ ವನಿತಾ ಪಡೆ ನಿಗದಿತ 50 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 435 ರನ್ ಪೇರಿಸಿದೆ. ಇದು ಏಕದಿನ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ಕಲೆಹಾಕಿರುವ ಅತ್ಯಧಿಕ ರನ್ ಆಗಿದೆ. ವಾಸ್ತವವಾಗಿ ಇದೇ ಐಲೆರ್ಂಡ್ ವಿರುದ್ಧ ನಡೆದಿದ್ದ 2ನೇ ಏಕದಿನ ಪಂದ್ಯದಲ್ಲಿ 370 ರನ್ ಬಾರಿಸುವ ಮೂಲಕ ಏಕದಿನದಲ್ಲಿ ಹೆಚ್ಚಿನ ಮೊತ್ತ ದಾಖಲಿಸಿದ ದಾಖಲೆಯನ್ನು ಸೃಷ್ಟಿಸಿದ್ದ ಟೀಂ ಇಂಡಿಯಾ ಇದೀಗ ಕೇವಲ 3 ದಿನಗಳ ಅಂತರದಲ್ಲಿ ತನ್ನದೇ ದಾಖಲೆಯನ್ನು ಪುಡಿಗಟ್ಟಿದೆ. ಇಷ್ಟೇ ಅಲ್ಲದೆ ಏಕದಿನ ಕ್ರಿಕೆಟ್‍ನಲ್ಲಿ ಪುರುಷರ ತಂಡ ದಾಖಲಿಸಿದ್ದ ಅತ್ಯಧಿಕ ಮೊತ್ತದ ದಾಖಲೆಯನ್ನು ಭಾರತ ಮಹಿಳಾ ತಂಡ ಮುರಿದಿದೆ. ವಾಸ್ತವವಾಗಿ ಭಾರತದ ಪುರುಷರ ತಂಡ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‍ನಲ್ಲಿ 5 ವಿಕೆಟ್ ನಷ್ಟಕ್ಕೆ 418 ರನ್ ಕಲೆಹಾಕಿತ್ತು. ಇದೀಗ ಭಾರತ ವನಿತಾ ಪಡೆ 435 ರನ್ ಕಲೆಹಾಕುವುದರೊಂದಿಗೆ ದಾಖಲೆಯನ್ನು ಸೃಷ್ಟಿಸಿದೆ.










