ಐಟಿ ಅಧಿಕಾರಿಗಳು ನನ್ನ ಮನೆಗೆ ಬರಲಿ ಎಂದು ಕಾಯುತ್ತಿದ್ದೇನೆ : ಹೆಚ್.ಡಿ ಕುಮಾರಸ್ವಾಮಿ.

347
firstsuddi

ಹಾಸನ : ಐಟಿ ಅಧಿಕಾರಿಗಳು ನನ್ನ ಮನೆ ಮೇಲೆ ದಾಳಿ ನಡೆಸಲಿ ಎಂದು ಕಾಯುತ್ತಿದ್ದೇನೆ. ಬಂದರೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಐಟಿ ದಾಳಿಯನ್ನು ವಿರೋಧಿಸುವುದಿಲ್ಲ. ಆದರೆ ನಿಖರವಾದ ಮಾಹಿತಿಯನ್ನು ಆಧರಿಸಿ ಐಟಿ ದಾಳಿ ನಡೆಯುತ್ತಿವೆಯೇ? ಬಿಜೆಪಿ ಪಕ್ಷದಲ್ಲಿ ಇರುವವರೆಲ್ಲರೂ ಬಿಕಾರಿಗಳಾ? ಐಟಿ ಅಧಿಕಾರಿಗಳು ನನ್ನ ಮನೆಗೆ ಬರಲಿ ಎಂದು ಕಾಯುತ್ತಿದ್ದೇನೆ. ಬಂದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸುತ್ತೇನೆ. ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಮಾಡಲು ಹಣಕಾಸಿನ ಕೊರತೆ ಇಲ್ಲ. ಈ ವಿಚಾರವಾಗಿ ಕೇಂದ್ರ ಮೇಲೆ ಆಪಾದನೆ ಮಾಡುವ ಅಗತ್ಯವೂ ಇಲ್ಲ. ಈ ಸರ್ಕಾರಕ್ಕೆ ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಮಾಡುವುದಕ್ಕೆ ಇಷ್ಟ ಇಲ್ಲ. ಬರೀ ಲೂಟಿ ಮಾಡುವುದೊಂದೆ ಇಷ್ಟ. ನಾನು ಮುಖ್ಯಮಂತ್ರಿ ಆಗಿದ್ದಾಗ ಯಾವುದೇ ಹಣಕಾಸು ಯೋಜನೆಯನ್ನು ಕಡಿಮೆ ಮಾಡಿರಲಿಲ್ಲ. ಲೂಟಿ ಹೊಡೆಯುವ ಕೆಲಸ ಮಾಡದೆ ಇದ್ದುದರಿಂದ ನಾನು ಆರಾಮಾಗಿದ್ದೇನೆ.
ದೇವೇಗೌಡರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಾಸನದಿಂದ ಸ್ಪರ್ಧಿಸಬಹುದಿತ್ತು. ಸ್ಪರ್ಧಿಸಿದ್ದರೆ ಸಂಸತ್ತಿನಲ್ಲಿ ಧ್ವನಿ ಇರುತ್ತಿತ್ತು. ರಾಜ್ಯದಲ್ಲಿ ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ದೇವೇಗೌಡ ಅವರು ಸಂಸತ್ತಿನಲ್ಲಿ ಇರಬೇಕಿತ್ತು. ಹೀಗಾಗಿ ದೇವೇಗೌಡ ಅವರಿಗೆ ಕರ್ನಾಟಕವನ್ನು ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗಿ ಎಂದು ಹೇಳುತ್ತಿದ್ದೇನೆ. ನಮ್ಮ ಕುಟುಂಬದಲ್ಲಿ ನಾವು ಕೆಲವು ತಪ್ಪನ್ನು ಮಾಡಿಕೊಂಡಿದ್ದೇವೆ. ಆದರೆ ರಾಜ್ಯದ ಜನರಿಗೆ ತೊಂದರೆಯಾಗುವಂತಹ ತಪ್ಪು ಮಾಡಿಲ್ಲ ಎಂದರು.