ಐಟಿ ದಾಳಿ ಹಿನ್ನಲೆ ; ಸಿಎಂ ಕಚೇರಿಯಿಂದ ಬಿಎಸ್‍ವೈ ಆಪ್ತ ಉಮೇಶ್‍ಗೆ ಗೇಟ್‍ ಪಾಸ್…

80
firstsuddi

ಬೆಂಗಳೂರು : ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಆಪ್ತ ಸಹಾಯಕರಾಗಿ ನಿಯೋಜನೆಗೊಂಡಿದ್ದ ಬಿ.ಎಸ್. ಯಡಿಯೂರಪ್ಪನವರ ಆಪ್ತ ಉಮೇಶ್ ಅವರ ಸೇವೆಯನ್ನು ಹಿಂಪಡೆಯಲಾಗಿದೆ.

ನಿನ್ನೆ ಉಮೇಶ್ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈಗಾಗಲೇ ಉಮೇಶ್ ನೀರಾವರಿ ಯೋಜನೆಗಳ ಟೆಂಡರ್ ಅಕ್ರಮದ ಆರೋಪ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ದಸರಾ ಹಬ್ಬದ ಉದ್ಘಾಟನೆ ಕಾರ್ಯಕ್ರಮದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಕಚೇರಿ ಅಧಿಕಾರಿಗಳಿಗೆ ಸೂಚನೆ ನೀಡಿ ಆಪ್ತ ಸಹಾಯಕನ ಹುದ್ದೆ ನೇಮಕ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿದರು ಎಂದು ಹೇಳಲಾಗುತ್ತಿದೆ.

ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಪ್ತ ಸಹಾಯಕನಾಗಿ ಕೂಡ ಉಮೇಶ್ ನೇಮಕಗೊಂಡಿದ್ದರು. ಆದರೆ ಇನ್ನೂ ಕೆಲಸ ಆರಂಭಿಸಿರಲಿಲ್ಲ. ಇದೀಗ ಐಟಿ ದಾಳಿ ಹಿನ್ನೆಲೆಯಲ್ಲಿ ನೇಮಕ ಆದೇಶ ಹಿಂಪಡೆಯಲಾಗಿದ್ದು ಮಾತೃ ಸಂಸ್ಥೆಯಾದ ಬಿಎಂಟಿಸಿ ಸೇವೆಗೆ ಬರುವಂತೆ ಅದು ಉಮೇಶ್ ಅವರಿಗೆ ಆದೇಶ ನೀಡಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದ ಉಮೇಶ್ ಮತ್ತೆ ಮಾತೃ ಸಂಸ್ಥೆ ಬಿಎಂಟಿಸಿಗೆ ಹೋಗ್ತಾರಾ ಎಂಬ ಕುತೂಹಲ ಮೂಡಿದೆ.