ಹಾವೇರಿ : ಫೆಬ್ರವರಿ ತಿಂಗಳಲ್ಲಿ ಬಜೆಟ್ ಮಂಡನೆಯಾಗುತ್ತದೆ. ಈ ಸಂಬಂಧ ಹಣಕಾಸಿನ ಇಲಾಖೆಯೊಂದಿಗೆ ಎರಡು ಸುತ್ತಿನ ಚರ್ಚೆಯಾಗಿದೆ. ಜನವರಿ ತಿಂಗಳಿನಿಂದಲೇ ಬಜೆಟ್ ಸಿದ್ಧತೆ ಶುರು ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಶಿಗ್ಗಾಂವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು.
ದೆಹಲಿಯಲ್ಲಿ ಸೋಮವಾರ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಏನೆಲ್ಲಾ ಮಾತುಕತೆಯಾಯಿತು ಎಂಬುದನ್ನು ಚರ್ಚೆಯ ನಂತರ ತಿಳಿಸುತ್ತೇನೆ. ದೆಹಲಿಯ ಭೇಟಿ ವೇಳೆ ಖಂಡಿತವಾಗಿ ರಾಜಕೀಯ ಚರ್ಚೆ ಆಗುತ್ತದೆ. ಚುನಾವಣೆ ತಯಾರಿ ಬಗ್ಗೆಯೂ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊರೊನಾದಿಂದ ತೊಡಕುಂಟಾಗುವುದೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಸಮ್ಮೇಳನ ಬಯಲು ಪ್ರದೇಶದಲ್ಲಿ ಆಗುವುದರಿಂದ, ತೊಂದರೆಯ ಸಾಧ್ಯತೆ ಇಲ್ಲ. ಆದರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮಾರ್ಗಸೂಚಿಗಳನ್ನು ಸೂಚಿಸಲಾಗುವುದು ಎಂದು ಹೇಳಿದರು.
ಒಕ್ಕಲಿಗ ಹಾಗೂ ಪಂಚಮಸಾಲಿ ಸಮುದಾಯಗಳಿಗೆ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಎಲ್ಲಾ ಮಟ್ಟದಲ್ಲಿ ಚರ್ಚೆ ಆಗಿದೆ ಎಂದು ಹೇಳಿದರು.
ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಟೆಸ್ಟ್ ಗಳನ್ನು ಹೆಚ್ಚಿಸುತ್ತೇವೆ. ಬೂಸ್ಟರ್ ಡೋಸ್ ಕೂಡಾ ಜಾಸ್ತಿ ಮಾಡುತ್ತಿದ್ದೇವೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಜ್ಜುಗೊಳಿಸುವುದು ಹಾಗೂ ಐಸಿಯು ಘಟಕಗಳನ್ನು ಸಿದ್ಧಪಡಿಸಿಕೊಳ್ಳುವುದು. ಮಾಸ್ಕ್ ಗಳನ್ನು ಧರಿಸಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು. ಏರ್ಪೋರ್ಟ್, ಬಸ್ ನಿಲ್ದಾಣಗಳಲ್ಲಿ ಮೊದಲು ಪಾಲಿಸುತ್ತಿದ್ದ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದರು.










