ಓದುವಂತೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಬಾಲಕಿ ನದಿಗೆ ಹಾರಿ ಆತ್ಮಹತ್ಯೆ…

126
firstsuddi

ಚಿಕ್ಕಬಳ್ಳಾಪುರ: ಚೆನ್ನಾಗಿ ಓದುವಂತೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಬಾಲಕಿಯೊಬ್ಬಳು ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

ಗೌರಿಬಿದನೂರು ನಗರದ ಸುಮಂಗಲಿ ಬಡಾವಣೆ ನಿವಾಸಿ ವಿಂಧ್ಯಶ್ರೀ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಗೌರಿಬಿದನೂರು ನಗರದ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಳು. ತಾಯಿ ಸಹ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು.

ತಡರಾತ್ರಿ ಆಟವಾಡುತ್ತಿದ್ದ ಮಗಳಿಗೆ ಓದುವಂತೆ ತಾಯಿ ಬುದ್ಧಿವಾದ ಹೇಳಿದ್ದು, ಇಲ್ಲವಾದರೆ ಮನೆ ಬಿಟ್ಟು ಹೋಗುವಂತೆ ತಾಕೀತು ಮಾಡಿದ್ದರು. ಇದೇ ಮಾತನ್ನು ಬಹಳ ಗಂಭೀರವಾಗಿ ತೆಗೆದುಕೊಂಡ ವಿಂಧ್ಯಶ್ರೀ ಸೀದಾ ಮನೆಯಿಂದ ಹೊರ ಹೋಗಿ ಗೌರಿಬಿದನೂರು ನಗರದ ಬೈಪಾಸ್ ರಸ್ತೆಯ ಉತ್ತರಪಿನಾಕಿನ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇತ್ತ ತಡರಾತ್ರಿ ಮಗಳಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಲಾಗಿತ್ತು. ಆದರೆ ಇಂದು ಬೆಳಗ್ಗೆ ಆಕೆಯ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಗೌರಿಬಿದನೂರು ಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.