ನವದೆಹಲಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿಯೊಬ್ಬಳ ತಲೆಗೆ ರಾಡ್ ನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ದಕ್ಷಿಣ ದೆಹಲಿಯ ಮಾಳವೀಯ ನಗರದ ಅರಬಿಂದೋ ಕಾಲೇಜು ಬಳಿಯ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ರಾಡ್‌ನಿಂದ ಹಲ್ಲೆ ನಡೆಸಿ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಮೃತ ವಿದ್ಯಾರ್ಥಿನಿ ಕಮಲಾ ನೆಹರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಗ್ರಿಸ್ ಎಂದು ಗುರುತಿಸಲಾಗಿದೆ. ಆಕೆ ತನ್ನ ಸ್ನೇಹಿತನೊಂದಿಗೆ ಉದ್ಯಾನವನಕ್ಕೆ ತೆರಳಿದ್ದಳು. ಘಟನೆ ಸಂಬಂಧ 28 ವರ್ಷದ ಆರೋಪಿ ಇರ್ಫಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಇರ್ಫಾನ್ ಮೃತ ಯುವತಿಯೊಂದಿಗೆ ಮದುವೆಯಾಗಲು ಬಯಸಿದ್ದ. ಆದರೆ, ಯುವತಿ ಮನೆಯವರು ಮದುವೆಗೆ ನಿರಾಕರಿಸಿದ್ದರು, ಈ ಹಿನ್ನೆಲೆ ನಾಗ್ರಿಸ್ ಇರ್ಫಾನ್ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದೇ ಕಾರಣಕ್ಕೆ ಆಕ್ರೋಶಗೊಂಡಿದ್ದ ಇರ್ಫಾನ್ ಆಕೆಯ ತಲೆಗೆ ರಾಡ್ ನಿಂದ ಹಲ್ಲೆ ಮಾಡಿ ಕೊಂದು ಹಾಕಿದ್ದಾನೆ. ಮೃತ ಯುವತಿಯ ಶವದ ಬಳಿ ರಾಡ್ ಕೂಡ ಪತ್ತೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಮಹಿಳಾ ಆಯೋಗದ ಸ್ವಾತಿ ಮಲಿವಾಲ್ ಅವರು ಘಟನೆಯನ್ನು ಗಮನಿಸಿ ಟ್ವೀಟ್ ಮಾಡಿದ್ದಾರೆ. ಮಾಳವೀಯಾ ನಗರದಂತಹ ಐಷಾರಾಮಿ ಪ್ರದೇಶದಲ್ಲಿ, ರಾಡ್ ನಿಂದ ಹೊಡೆದು ಹುಡುಗಿಯನ್ನು ಕೊಂದಿದ್ದಾರೆ. ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ. ಇದು ಯಾರಿಗೂ ಮುಖ್ಯವಲ್ಲ. ಪತ್ರಿಕೆಗಳ ವರದಿಗಳು, ಹುಡುಗಿಯರ ಹೆಸರುಗಳನ್ನು ಬದಲಾಯಿಸಲಾಗುತ್ತದೆ ಮತ್ತು ಅಪರಾಧಗಳು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.










