ನವದೆಹಲಿ : ದೇಶಾದ್ಯಂತ ಓಮಿಕ್ರಾನ್ ಸೋಂಕು ಏಕಾಏಕಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ತಡೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ.
ದೆಹಲಿ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಜಾರ್ಖಂಡ್ ಕೊರೊನಾ ಪ್ರಸರಣವೂ ಕಳೆದೆರಡು ವಾರಗಳಿಂದ ಹೆಚ್ಚುತ್ತಿದ್ದು, ಪಾಸಿಟಿವಿಟಿ ದರವೂ ಅಧಿಕವಾಗುತ್ತಿದೆ. ಹೀಗಾಗಿ ವ್ಯಾಕ್ಸಿನೇಷನ್ ವ್ಯಾಪ್ತಿ ಹೆಚ್ಚಿಸಬೇಕು. ಟೆಸ್ಟಿಂಗ್ ಹೆಚ್ಚು ಮಾಡಬೇಕು ಮತ್ತು ಆಸ್ಪತ್ರೆಗಳಲ್ಲಿ ಬೆಡ್ಗಳನ್ನು ಸಿದ್ಧವಾಗಿಡಬೇಕು ಎಂದು ಸೂಚಿಸಲಾಗಿದೆ.
ದೆಹಲಿಯಲ್ಲಿ ನಿನ್ನೆ 923 ಕೊವಿಡ್ 19 ಕೇಸ್ಗಳು ದಾಖಲಾಗಿವೆ. ಇಲ್ಲಿ ಪಾಸಿಟಿವಿಟಿ ರೇಟ್ 1.29ರಷ್ಟಿದೆ. ನಗರದಲ್ಲಿ ಕೊವಿಡ್ 19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಹಾಗೇ ಅದರೊಂದಿಗೆ ಓಮಿಕ್ರಾನ್ ಪ್ರಕರಣಗಳೂ ಅಧಿಕವಾಗುತ್ತಿವೆ. ಇತ್ತೀಚೆಗೆ ಬಂದ ಜಿನೋಮ್ ಸಿಕ್ವೆನ್ಸಿಂಗ್ ರಿಪೋರ್ಟ್ ಪ್ರಕಾರ, ಒಟ್ಟಾರೆ ಕೊವಿಡ್ 19 ಸೋಂಕಿತರಲ್ಲಿ ಶೇ.46ರಷ್ಟು ಒಮಿಕ್ರಾನ್ ಪ್ರಕರಣಗಳಾಗಿವೆ. ಇನ್ನೂ ಹಲವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಓಮಿಕ್ರಾನ್ ಕ್ರಮೇಣ ಸಮುದಾಯ ಪ್ರಸರಣವಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ದೇಶದಲ್ಲಿ ಒಂದೇ ದಿನ 180 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 961ಕ್ಕೆ ಏರಿಕೆಯಾಗಿದೆ.










