ಕಟ್ಟಡದ 20ನೇ ಮಹಡಿಯಿಂದ ಬಿದ್ದು ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ಸಾವು…

48
firstsuddi

ಗುರುಗ್ರಾಮ್ : ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಅವರು ಬಹುಮಹಡಿ ಕಟ್ಟಡದ 20ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಗುರುಗ್ರಾಮದ ಹೈರೈಸ್ ಬಿಲ್ಡಿಂಗ್ ನಲ್ಲಿ ಈ ಘಟನೆ ನಡೆದಿದ್ದು, ರಿತೇಶ್ ಅಗರ್ವಾಲ್ ವಿವಾಹವಾದ ಕೆಲವೇ ದಿನಗಳ ಅಂತರದಲ್ಲಿ ಈ ದುರ್ಘಟನೆ ನಡೆದಿದೆ.

ರಮೇಶ್ ಅಗರ್ವಾಲ್ ಮೃತಪಟ್ಟಿರುವ ಬಗ್ಗೆ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಘಟನೆ ನಡೆದಾಗ ರಮೇಶ್ ಅಗರ್ವಾಲ್ ಅವರ ಪತ್ನಿ, ಪುತ್ರ ರಿತೇಶ್ ಅಗರ್ವಾಲ್ ಹಾಗೂ ಪತ್ನಿ ಮನೆಯಲ್ಲಿದ್ದರು. ಸದ್ಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಸಾವಿನ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಗುರುಗ್ರಾಮ್ ಪೂರ್ವ ವಲಯದ ಡಿಸಿಪಿ ಕಚೇರಿಯ ಮೂಲಗಳು ತಿಳಿಸಿವೆ.

ನನ್ನ ದಾರಿ ದೀಪ, ಶಕ್ತಿಯಾಗಿದ್ದ ನನ್ನ ತಂದೆ ಶ್ರೀ ರಮೇಶ್ ಅಗರ್ವಾಲ್ ಮಾ.10 ರಂದು ಮೃತಪಟ್ಟಿದ್ದಾರೆ. ಅವರು ತುಂಬು ಜೀವನ ನಡೆಸಿದ ವ್ಯಕ್ತಿಯಾಗಿದ್ದು, ನನ್ನನ್ನೂ ಸೇರಿದಂತೆ ಹಲವರಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ನಿಧನ ನಮ್ಮ ಕುಟುಂಬಕ್ಕೆ ಅಗಾಧ ನಷ್ಟ ಉಂಟುಮಾಡಿದೆ. ನನ್ನ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಅನುರಣಿಸುತ್ತವೆ. ಈ ದುಃಖದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ ಎಂದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.