ಕಾಂಗ್ರೆಸ್ ಪಕ್ಷ ಕುಸಿದು ಬಿದ್ದ ಹಲವು ಸಂದರ್ಭಗಳನ್ನು ಉಲ್ಲೇಖಿಸಿ ಬರೆಯಬಹುದು. ಹೀಗೆ ಬಿದ್ದಾಗ ಮುಗಿದೇ ಹೋಯಿತೆಂದು ಭಾವಿಸುವಾಗ ಎದ್ದ ಹಲವು ಉದಾಹರಣೆಗಳಿವೆ. ಆದರೆ, ಇದೀಗ ಅತ್ಯಂತ ತಳಮಟ್ಟ ತಲುಪಿಬಿಟ್ಟಿದೆ. ಹರ್ಯಾಣದಲ್ಲಿ ಪಕ್ಷದ ಹೀನಾಯ ಸೋಲಿನ ಕಾರಣ ಅಲ್ಲಿನ ಅಧ್ಯಕ್ಷ ಅಶೋಕ್ ತನ್ವರ್ ರಾಜೀನಾಮೆ ಕೇಳಿದರೆ “ನೀವು ನನ್ನನ್ನು ಮಗಿಸಬೇಕು ಎಂದು ಬಯಸಿದರೆ ಗುಂಡಿಟ್ಟು ಸಾಯಿಸಿಬಿಡಿ” ಎಂದು ಅರಚಾಡಿದ್ದಾರೆ. ಅಲ್ಲಿ ಶೂನ್ಯ ಸಾಧನೆ. ಇಂತಹದ್ದೊಂದು ಸೋಲು ಕಾಂಗ್ರೆಸ್ ಗೆ ಮುಖ್ಯ ಪಾಠ ಆಗಬೇಕು. ದಿನದಿಂದ ದಿನಕ್ಕೆ ಕಾಂಗ್ರೆಸ್ ನ ರಾಜಕೀಯ ಗ್ರಾಫ್ ಕುಸಿಯುತ್ತಲೇ ಇದೆ. ಕಾಂಗ್ರೆಸ್ ಏಕೆ ಸೋತಿತೆಂಬ ಕಾರಣವನ್ನು ಕಂಡುಕೊಳ್ಳಬೇಕಿದೆ. ಕರ್ನಾಟಕದಲ್ಲಿ ಮಾಜಿ ಎಂಎಲ್ ಸಿ ವಿಆರ್ ಸುದರ್ಶನ್ ಅಧ್ಯಕ್ಷತೆಯಲ್ಲಿ ಸತ್ಯಶೋಧನ ಸಮಿತಿಯನ್ನು ರಚಿಸಲಾಗಿದೆ. ಇದು ಪೊಲೀಸರ ವಿರುದ್ಧ ಪೊಲೀಸರೇ ದೂರು ಕೊಟ್ಟಂತಾಗಿದೆ. ಸತ್ಯ ಶೋಧನಾ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದ ರಾಜಕೀಯ ತಜ್ಞರು ಇರಬೇಕಿತ್ತು. ಇಂತಹ ಗತಕಾಲದ ಐಡಿಯಾಲಜಿಗಳಿಂದಾಗಿಯೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಯಾರೂ ಮುಂದೆ ಬರುತ್ತಿಲ್ಲ.
ಶುದ್ಧ ಹಸ್ತ ಎನಿಸಿಕೊಂಡಿರುವ ಮಾಜಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅಂತಹವರು ಕಾಂಗ್ರೆಸ್ ನೊಗ ಹೊರಲು ಸಾಧ್ಯವಿಲ್ಲ ಎಂದಿದ್ದಾರೆ. ಕನಿಷ್ಠ ಕಾರ್ಯಾಧ್ಯಕ್ಷ ಹುದ್ದೆಯನ್ನಾದರೂ ವಹಿಸಿಕೊಳ್ಳಬೇಕು ಎಂದು ಕೆ.ಸಿ.ವೇಣುಗೋಪಾಲ್ ಅವರನ್ನು ಕೋರಿದರೆ, ಅವರು ಕೂಡ ಜವಾಬ್ದಾರಿ ಹೊರಲು ಸಿದ್ಧರಿಲ್ಲ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಬಂಡಾಯದ ಬೆಂಕಿ ಎದ್ದಾಗ ರಾಹುಲ್ ಗಾಂಧಿ ಹುದ್ದೆ ತೊರೆಯುವುದು ಬೇಡ ಎಂದು ಮನವಿ ಮಾಡಿದ್ದಾರೆ. ಹಾಗೆಯೇ ಕಾಂಗ್ರೆಸ್ ಗೆ ಮಹತ್ವದ ಸರ್ಜರಿಯೊಂದು ಆಗಬೇಕಿದೆ. ಇದರಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಗಜಗಾತ್ರದ ಸಮಿತಿಯನ್ನು ರಾಹುಲ್ ಗಾಂಧಿ ವಿಸರ್ಜಿಸಿದ್ದಾರೆ. ಪಕ್ಷದಲ್ಲಿ ಶಿಸ್ತು ತರಲು ರೋಷನ್ ಬೇಗ್ ಅವರನ್ನು ಅಮಾನತ್ತುಗೊಳಿಸಲು ಅನುಮತಿಸಿದ್ದಾರೆ. ಇನ್ನೊಂದೆಡೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ರಾಹುಲ್ ಗಾಂಧಿ ಅವರ ನಿರ್ಧಾರ ‘ಆತ್ಮಹತ್ಯೆ’ಗೆ ಸಮ. ಭಾಜಪದ ಮುಂದೆ ಮಂಡಿಯೂರಿ ಮಣಿದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲಾ ರಾಹುಲ್ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ. ಯಾವುದೇ ಅನುಮಾನ ಇಲ್ಲ ಎಂದು ಕೂಡ ಹೇಳಿದ್ದಾರೆ. firstsuddi
ಇದನ್ನೆಲ್ಲಾ ಕಂಡಾಗ ನಮ್ಮ ನಾಡಿನ ಸಿದ್ದರಾಮಯ್ಯ ಅವರಂತಹ ಜನ ನಾಯಕರನ್ನು ದೇಶದ ಉದ್ದಗಲಕ್ಕೂ ಗುರುತಿಸಿ ಉತ್ತೇಜಿಸುವ ಕಾರ್ಯವೂ ಆಗಬೇಕಿದೆ. ವಿರೋಧ ಪಕ್ಷದ ನಾಯಕರಾಗಿ, ಆಡಳಿತದ ಹುಳುಕನ್ನು ಸಮರ್ಥವಾಗಿ ಎತ್ತಿ ತೋರಿಸಿಕೊಡುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡಬೇಕಿದೆ. ಇದೀಗ ಸಿದ್ದರಾಮಯ್ಯ ಅವರು ಎತ್ತಿರುವ ಪ್ರಶ್ನೆ ನನ್ನ ಕಿವಿಯಲ್ಲಿ ರಿಂಗಣಿಸುತ್ತದೆ. ಐದು ವರ್ಷಗಳಲ್ಲಿ ಜಿಡಿಪಿ ಪಾತಳಕ್ಕಿಳಿದಿದೆ. ರೂಪಾಯಿ ಮೌಲ್ಯ ಕುಸಿದಿದೆ. ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಿರುದ್ಯೋಗದ ಸಮಸ್ಯೆ ದೊಡ್ಡದಾಗಿ ಬೆಳೆದಿದೆ. ರೈತರ ಸಮಸ್ಯೆಗಳು ಬಗೆಹರಿದಿಲ್ಲ. ಇಷ್ಟಾದರೂ ಮೋದಿ ಸರ್ಕಾರವನ್ನು ಮಾಧ್ಯಮದವರು ಸೇರಿ ಇಡೀ ದೇಶದ ಜನರು ಹಾಡಿ ಹೊಗಳಿದ್ದಾರೆ. ಪುಲ್ವಾಮ ಪ್ರಕರಣದಲ್ಲಿ ದಾರಿ ತಪ್ಪಿಸಿದರು. ಸೈನಿಕರ ಸಾವು ತಪ್ಪಿಸಬಹುದಿತ್ತು. ಬೇಹುಗಾರಿಕೆ ಇಲಾಖೆ ವಿಫಲವಾಗಿದೆ. ಇದನ್ನು ಪ್ರಶ್ನೆ ಮಾಡಬಾರದೆ? ಸಂವಿಧಾನದಲ್ಲಿ ನಮಗೆ ಪ್ರಶ್ನೆ ಮಾಡುವ ಹಕ್ಕಿಲ್ಲವೆ? ಎಂದು ಕೇಳಿದ್ದಾರೆ.
ಖಂಡಿತವಾಗಿಯೂ ಇದೆ. ಇಂತಹದ್ದೊಂದು ಸೋಲಿಗೆ ಮುನ್ನಡಿ ಬರೆದವರಾರು? ನಿಮ್ಮದೇ ಪಕ್ಷದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 1989 ರಲ್ಲಿ ಅಯೋಧ್ಯೆಯ ರಾಮಮಂದಿರದಿಂದಲೇ ‘ರಾಮ ರಾಜ್ಯ’ ಆರಂಭವಾಗುತ್ತದೆ ಎಂಬ ಹೇಳಿಕೆ ನೀಡಿದ್ದರು. ರಾಹುಲ್ ತಂದೆ ಅದ್ಯಾವ ಘಳಿಗೆಯಲ್ಲಿ ನುಡಿದರೋ ಅದೇ ಸತ್ಯವಾಗಿದೆ. ಆಗ ಎದ್ದ ಭಾಜಪ ಇವತ್ತು ದೇಶದ ಗದ್ದುಗೆಯನ್ನು ಎರಡನೇ ಬಾರಿ ಹಿಡಿದಿದೆ. ಅಂದು ಸುಪ್ರೀಂ ಕೋರ್ಟಿನ ತೀರ್ಪು ಉಲ್ಲಂಘಿಸಿಯೂ ಇಟ್ಟಿಗೆ ಇಡುವ ‘ಶಿಲಾನ್ಯಾಸ’ ಸಮಾರಂಭಕ್ಕೆ ರಾಜೀವ್ ಗಾಂಧಿ ಅನುವು ಮಾಡಿಕೊಟ್ಟಿದ್ದರು. ಅದರ ಫಲವನ್ನಿಂದು ರಾಹುಲ್ ಸವಿಯಬೇಕಿದೆ. firstsuddi
ಇರಲಿ, ಚುನಾವಣೆ ಎಂದ ಮೇಲೆ ಗೆಲುವು ಮತ್ತು ಸೋಲಿಗೆ ಏಳುವ ಕಾರಣಗಳು ಮಹತ್ವ ಪಡೆಯುತ್ತವೆ. ಇದೊಂದು ಸಂಕೀರ್ಣವಾದ ವಿಚಾರ. ದೊಡ್ಡದೊಂದು ಕಥೆಯನ್ನೇ ಕಟ್ಟಿಕೊಡುತ್ತದೆ.
ದೇಶದ ಬಹುಸಂಖ್ಯಾತ ಅಹಿಂದ ವರ್ಗದವರು ಅಭಿನಂದನಾರ್ಹರು. ಆತ್ಮಸಾಕ್ಷಿ, ಕೃತಜ್ಞತೆ, ಬಡತನ , ಹಸಿವು, ನಿರುದ್ಯೋಗ , ದೌರ್ಜನ್ಯ, ಅಸಮಾನತೆ ಎಲ್ಲವನ್ನೂ ಮರೆತು ಮೋಡಿಯ ಮಾತುಗಳಿಗೆ ಬಲಿಯಾಗಿದ್ದಾರೆ. ‘ಹಿಂದೂ ಮತಬ್ಯಾಂಕ್’ ಸಬಲೀಕರಣಗೊಳಿಸಿದ್ದಾರೆ. ಧರ್ಮದ ಕಾರಣಕ್ಕಾಗಿಯೋ ಅಥವಾ ಆಮಿಷಕ್ಕೊಳಗಾಗಿಯೋ ಇಲ್ಲವೇ ‘ಸುರಕ್ಷತೆ’ ಎಂಬ ನಾಲ್ಕಕ್ಷರದ ಗೀಳಿಗೆ ಬಿದ್ದೋ ಮತ ಚಲಾಯಿಸಿಬಿಟ್ಟಿದ್ದಾರೆ. ಕರ್ನಾಟಕದ ಎಲ್ಲಾ ಮೀಸಲು ಕ್ಷೇತ್ರಗಳಲ್ಲಿಯೂ ಭಾಜಪ ಅಭ್ಯರ್ಥಿಗಳು ಗೆದ್ದಿರುವುದೇ ಇದು ಸಾಕ್ಷಿಯಾಗಿದೆ. ಇಲ್ಲಿ ಅಲ್ಪಸಂಖ್ಯಾತರರ ಮತಗಳು ಕೂಡ ‘ಹಿಂದೂ ಮತಬ್ಯಾಂಕ್’ ಗಟ್ಟಿಗೊಳಿಸಿದೆ ಎಂಬುದನ್ನು ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಲೋಕಸಭಾ ಕ್ಷೇತ್ರಗಳ ಫಲಿತಾಂಶ ತೋರಿಸಿಕೊಡುತ್ತದೆ. ಇದೇ ರೀತಿ ಬಿಹಾರದ ಕಾಟಿಹಾರ, ಬಾಂಗ್ಲಾದ ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕೂಡ ಇದನ್ನೇ ಪುಷ್ಠಿಕರಿಸುತ್ತದೆ. ಜಂಗೀಪುರ ಕ್ಷೇತ್ರದಲ್ಲಿ ಶೇಕಡ 25ಕ್ಕೂ ಹೆಚ್ಚು ಮುಸಲ್ಮಾನ ಮತದಾರರಿದ್ದಾರೆ. ಇಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮಗ ಅವಿಜಿತ್ ಮುಖರ್ಜಿ ಸ್ಪರ್ಧಿಸಿದ್ದರು. ಉತ್ತರ ಮತ್ತು ದಕ್ಷಿಣ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಇವೆರೆಡೂ ಕ್ಷೇತ್ರಗಳು ಫನಿಖಾನ್ ಚೌಧರಿ ಕುಟುಂಬಕ್ಕೆ ಮೀಸಲಾಗಿದ್ದವು. ಇವೀಗ ಭಾಜಪದ ಪಾಲಾಗಿವೆ. ಅದರಲ್ಲೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿರುವಷ್ಟು ಚರ್ಚು-ಮಸೀದಿ ಬೇರೆಲ್ಲೂ ಕಾಣಲು ಆಗದು. ಇಲ್ಲಿ ಚರ್ಚಿನ, ಮಸೀದಿಯ ಕಾನ್ವೆಂಟು-ಮದರಾಸ, ಆಸ್ಪತ್ರೆ, ಸಂಘ ಸಂಸ್ಥೆಗಳ ಸಂಖ್ಯೆಗೇನೂ ಕೊರತೆಯೇ ಇಲ್ಲ. ಮತಾಂತರಗೊಂಡವರೇ ಇಲ್ಲಿ ಬಹುಸಂಖ್ಯಾತರು. ಆದರೂ ಪ್ರತಿ ಶುಕ್ರವಾರ ಮುಸಲ್ಮಾನರು, ಪ್ರತಿ ಭಾನುವಾರ ಕ್ರೈಸ್ತರು ಕೂಡಿ ‘ಜಾತ್ಯತೀತ ಶಕ್ತಿ’ಗಾಗಿ ಪ್ರಾರ್ಥಿಸಿದೆಲ್ಲವೂ ಏಸಪ್ಪನ ಪಾದವಿರಲಿ, ಅಲ್ಲಾಹುನ ಪಾದವನ್ನು ತಲುಪಿಲ್ಲ. ಬದಲಿಗೆ ಅಯೋಧ್ಯೆಯ ರಾಮಮಂದಿರವನ್ನು ತಲುಪಿಬಿಟ್ಟಿದೆ. ಇನ್ನು ಜಾತ್ಯತೀತ ಶಕ್ತಿಯನ್ನು ಬಲಗೊಳಿಸಬೇಕಿದ್ದ ದ.ಸಂ.ಸಯ ಜಿಲ್ಲಾ ಬಣಗಳು ಅದೆಲ್ಲಿ ಅಡಗಿ ಕುಳಿತವೋ ಕಾಣಲು ಆಗಲೇ ಇಲ್ಲ. ಇದೇ ರೀತಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಇಂದಿಗೂ ‘ಯಜಮಾನಿಕೆ ಸಂಸ್ಕೃತಿ’ ಇದೆ ಸಂಸ್ಥೆಯಲ್ಲಿ ಹೇರಳವಾಗಿರುವ ಹಿಂದುಳಿದವರಿಗೆ ನಾವು ಹಿಂದುಳಿದವರು ಮತ್ತು ಮೀಸಲಾತಿಯ ಫಲಾನುಭವಿಗಳು ಎಂಬುದನ್ನೂ ಕೂಡ ಅರಿಯದಷ್ಟು ಮುಗ್ಧರಿದ್ದಾರೆ. ಇವರಿಗೆ ಒಬಿಸಿಯಲ್ಲಿ ಮೊದಲ ಅಕ್ಷರ ಒ ಅಂದರೆ ಇತರರು ಎಂದಷ್ಟೇ ಗೊತ್ತು. ಇವರುಗಳಿಗೆ ಉಪ್ಪಾರ ಸಮುದಾಯಕ್ಕೊಂದು, ಸವಿತಾ ಸಮುದಾಯಕ್ಕೊಂದು, ಮಡಿವಾಳ ಸಮುದಾಯಕ್ಕೊಂದು, ಈಡಿಗ ಸಮುದಾಯಕ್ಕೊಂದು ಲೋಕಸೇವಾ ಆಯೋಗದಲ್ಲಿ ಸದಸ್ಯತ್ವವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟಿದ್ದಾರೆಂಬುದು ಗೊತ್ತಿಲ್ಲ. ಕೇಂಗೇರಿ ಬಳಿ ಹಿಂದುಳಿದ ಸಮುದಾಯಗಳು ಸಮುದಾಯ ಭವನ ಕಟ್ಟಿಕೊಳ್ಳಲು ಎಕರೆ ಲೆಕ್ಕದಲ್ಲಿ ಜಾಗ ಕೊಟ್ಟಿದ್ದಾರೆನ್ನುವುದನ್ನು ಅರಿಯರು.ಇವರಿಗೆ ಅವಕಾಶ ಸಿಕ್ಕಿಲ್ಲ ಎಂದು ಪರಸ್ಪರ ಕಾಲೆಳೆದುಕೊಳ್ಳುವುದನ್ನು ಮಾತ್ರ ಬಿಡಲಾರರು. ಇಂತಹ ಜ್ಞಾನಿಗಳಲ್ಲಿ ಜಾಗೃತಿ ಮೂಡಿಸಬೇಕಾದ ಸಂಘಟನೆಗಳಂತೂ ಹಾಸ್ಟೆಲ್, ತರಕಾರಿ, ಸುಣ್ಣ, ಬಣ ಎಂದು ಹತ್ತಾರು ಬಾಬುತ್ತುಗಳಲ್ಲಿ ಲೆಕ್ಕ ಬರೆಯುವುದರಲ್ಲಿಯೇ ಮಗ್ನಗೊಂಡು ಬಿಟ್ಟಿವೆ. ಯಾವುದೇ ಸರ್ಕಾರ ಬಂದರೂ ಸರಿ, ಅವರ ಕೈಗೊಂದು ನಿಂಬೆಹಣ್ಣಿಟ್ಟು, ಹಾರ ಹಾಕಿ, ಹಣ ಕೊಡಿ ಎಂದು ದುಂಬಾಲು ಬೀಳುತ್ತವೆ. ಇವರುಗಳಿಂದಿಗೂ, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಕೊಟ್ಟ ಯೋಜನೆ, ಆರ್ಥಿಕ ನೆರವಿನ ಬಗ್ಗೆ ಹೇಳಿರುವುದೇ ಇಲ್ಲ. ಯಾವ ರೀತಿ ಹೇಳಬೇಕೆಂಬ ಕಲ್ಪನೆಯನ್ನು ಹೊಂದಿಲ್ಲ. ಶತಮಾನದ ಹಿಂದಿನ ಬುಡಕಟ್ಟು ವರ್ಗದ ಗುಣಲಕ್ಷಣವನ್ನಂತೂ ಮರೆತೇ ಇಲ್ಲ. ಇವು ನೀರಿನಲ್ಲಿ ಕೊಕ್ಕರೆ ಪ್ರಾರ್ಥಿಸಿದಂತೆ, ಕಾದು ಕುಳಿತಿವೆ.
ಇಷ್ಟೊಂದು ಕಠಿಣವಾಗಿ ಹೇಳಲು ಕಾರಣ, ಲೋಕಸಭಾ ಚುನಾವಣೆಯ ಫಲಿತಾಂಶ. ಒಬ್ಬ ಪ್ರಜ್ವಲ್, ಒಬ್ಬ ಡಿಕೆ ಸುರೇಶ್ ಬಿಟ್ಟರೆ ಉಳಿದವರಾರು ಗೆದ್ದೇ ಇಲ್ಲ. ಸೋತ ಬಿಕೆ ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ವಿಜಯ್ ಶಂಕರ್, ಕೆಎಚ್ ಮುನಿಯಪ್ಪ, ಬಿಎನ್ ಚಂದ್ರಪ್ಪ, ವೀರಪ್ಪ ಮೊಯ್ಲಿ, ಧ್ರುವ ನಾರಾಯಣರಂತಹ ‘ಅಹಿಂದ’ ಜಪ ಮಾಡುವವರಿಗೆ ಅಹಿಂದ ವರ್ಗದವರೇ ಸರಿಯಾಗಿ ಇಕ್ಕಿದ್ದಾರೆ.
ಹೌದು, ಮಲ್ಲಿಕಾರ್ಜುನ ಖರ್ಗೆಯಂತಹ ನಾಯಕನ ಸೋಲಿಗೆ ಮುನ್ನುಡಿ ಬರೆದವರಲ್ಲಿ ಜಾಧವ್, ಬಾಬುರಾವ್ ಚಿಂಚನಸೂರ್, ಸುಭಾಷ್ ಗುತ್ತೇದಾರ್ ಜೊತೆಗೆ ಹಿಂದುಳಿದ ಸಮುದಾಯದ ಸ್ವಾಮೀಜಿಯೊಬ್ಬರು ಸೇರಿಕೊಂಡಿದ್ದರು.
ಖರ್ಗೆ ತಂದ ಇಎಸ್ ಐ ಆಸ್ಪತ್ರೆ, ಕೇಂದ್ರಿಯ ವಿ.ವಿ. ಆರ್ಟಿಕಲ್ 371ಜೆ.ಇದ್ಯಾವುದೂ ಚುನಾವಣೆಯಲ್ಲಿ ಗಣನೆಗೆ ಬಂದಿಲ್ಲ. ಇಲ್ಲೇನಿದ್ದರೂ ಹಠ ಸಾಧನೆ, ದ್ವೇಷ ಸಾಧನೆಯೇ ಪ್ರವರ್ಧಮಾನಕ್ಕೆ ಬಂದಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕೊಟ್ಟ ಸಿಇಟಿಯಿಂದ ಲಕ್ಷಾಂತರ ಹಿಂದುಳಿದ ಸಮುದಾಯದ ಯುವಕರು ವೈದ್ಯರು, ಇಂಜಿನಿಯರ್ ರಾದರು. ಇವರನ್ನು ಹಣಿಯಲು ಮತ್ತದೇ ಹಿಂದುಳಿದ ವರ್ಗಗಳ ನೇತಾರನೊಬ್ಬ ಹಠ ಸಾಧನೆ ಮಾಡಿ ಮೊಯ್ಲಿಯನ್ನು ಮೂಲೆಗೆ ಸೇರಿಸಿಬಿಟ್ಟಿದ್ದಾರೆ. ಮೈಸೂರಿನ ವಿಜಯ್ ಶಂಕರ್ ಸೋಲಿಗೆ ಕಾಂಗ್ರೆಸ್ ನ ಬೆಂಬಲಿತ ಹಿರಿಯ ಸಚಿವರಿಬ್ಬರ ಜಾತಿಪ್ರೇಮವೇ ಕಾರಣವಾಗಿದೆ. ಕೋಲಾರದಲ್ಲಿ ಕೆಎಚ್ ಮುನಿಯಪ್ಪ ಸೋಲಿಗೆ ಹಿಂದುಳಿದವರಿಗಿಂತ, ದಲಿತ ಮುಖಂಡರ ಕೊಡುಗೆಯೇ ದೊಡ್ಡದಿದೆ. ದುರಂತ ಎಂದರೆ ಖರ್ಗೆ ಮತ್ತು ಮುನಿಯಪ್ಪ ಅವರಂತಹ ಎಡ-ಬಲ ನಾಯಕರನ್ನುಪಾರ್ಲಿಮೆಂಟಿನಲ್ಲಿ ಕಾಣಲು ಇನ್ನೊಂದು ಶತಮಾನವಾದರೂ ಬೇಕು. ಹಿಂದುಳಿದವರಿಗೆ ಅನ್ಯಾಯ ಅದಾಗಲೆಲ್ಲಾ, ರಾಜ್ಯ ಸಭೆಯಲ್ಲಿ ಧ್ವನಿ ಎತ್ತುವ ಏಕೈಕ ನಾಯಕ ಬಿಕೆ ಹರಿಪ್ರಸಾದ್. ಇವರ ಸೋಲಿಗೆ ಕಾಂಗ್ರೆಸ್ ಶಾಸಕರುಗಳೇ ಕಾರಣಕರ್ತರಾಗಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ನೆಲೆಸಿರುವ ‘ಅಹಿಂದ’ ವರ್ಗಕ್ಕೆ ಬಿ.ಕೆ. ಹರಿಪ್ರಸಾದ್ ನಮ್ಮ ಹಿತೈಷಿ ಎಂಬುದನ್ನು ಕೂಡ ಮರೆತು ಕೈ ಮೆಲೇಳದಂತೆ ಮಾಡಿಬಿಟ್ಟಿದ್ದಾರೆ. ಸಂಭಾವಿತ ಸಂಸದ ಬಿ.ಎನ್. ಚಂದ್ರಪ್ಪ ಸೋಲಿಗೆ ಅಲ್ಲಿಯ ಹಿಂದುಳಿದ ಸಮುದಾಯ ಒಂದು ಟೊಂಕ ಕಟ್ಟಿ ನಿಂತಿತ್ತು. ಅತ್ಯಂತ ಕ್ರೀಯಾಶೀಲ ಸಂಸದರಾಗಿದ್ದ ಧ್ರುವನಾರಾಯಣ ಸೋಲಿಗೆ ಮತ್ತದೇ ದಲಿತರು ಮತ್ತು ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ಸಚಿವರೊಬ್ಬರ ನಿರಾಸಕ್ತಿ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಸೋಲಿನಗಾಥೆ ಭಾರತದ ರಾಜಕಾರಣದ ಮೇಲೆ ಬಲವಾದ ಪ್ರಭಾವ ಬೀರಿದೆ. ಪ್ರಧಾನಿ ಮೋದಿಗೆ ಎದುರಾಗಿ ದಿಟ್ಟ ವಿರೋಧ ಪಕ್ಷವಾಗಿ ಕಾಂಗ್ರೆಸ್ ವಾದಿಸದೆ ಇದ್ದಿದ್ದರಿಂದಲೇ ರಾಹುಲ್ ಗಾಂಧಿ ಹಿಂದುತ್ವದ ಅಂಗಿಯನ್ನು ತೊಟ್ಟು ಮೆರೆದರು. 12 ವರ್ಷಗಳ ಕಾಲ ಸಂಸದನಾಗಿದ್ದರೂ, ರಾಜಕೀಯ ಪಟುಗಳುನ್ನು ಕಲಿಯಲಿಲ್ಲ. ದೇಶದ ಉದ್ದಗಲಕ್ಕೂ ರಫೇಲ್, ಬಡತನ, ಹಸಿವಿನ ಸಾವು, ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಪ್ರಕರಣ, ಸಿಬಿಐ ಬಾಸ್ ಗಳ ಕಾದಾಟ , ಜಸ್ಟೀಸ್ ಲೋಧಾ ಪ್ರಕರಣ, ಕೋಟಿಗಟ್ಟಲೇ ಹೊತ್ತೊಡಿದವರ ಬಗ್ಗೆ ಗಂಭೀರ ಚರ್ಚೆಯೇ ಆಗಲಿಲ್ಲ. ಆದರೆ ಇದ್ಯಾವುದೂ ಜನಸಾಮಾನ್ಯರನ್ನೂ ತಲುಪಲೇಇಲ್ಲ. ಇಂತಹ ರಾಷ್ಟ್ರೀಯ ಸಮಸ್ಯೆಗಳನ್ನು ಜನರ ಬಳಿಗೆ ಕೊಂಡೊಯ್ದು ಚರ್ಚಿಸುವಂತೆ, ರಾಜ್ಯ ನಾಯಕರಿಗೆ ಕಿವಿಮಾತು ಹೇಳಲು ಆಗದಷ್ಟು ರಾಹುಲ್ ಅಸಹಾಯಕರಾಗಿ ಉಳಿದುಬಿಟ್ಟರು. ಒಬ್ಬ ಸಿದ್ದರಾಮಯ್ಯ ಬಿಟ್ಟರೆ ಉಳಿದವರ್ಯಾರು ಧ್ವನಿ ಎತ್ತಲೇ ಇಲ್ಲ. ಇದಲ್ಲದೆ, ಸಂಸತ್ತಿನಲ್ಲಿ ಭೋಫೋರ್ಸ್ ನಂತಹ ಗಂಭೀರ ಪ್ರಕರಣದ ಬಗ್ಗೆ ಚರ್ಚಿಸುವಾಗ ಪ್ರಧಾನಿಯನ್ನು ಆಲಂಗಿಸಿ ರಾಹುಲ್ ಉತ್ತಮ ನಡವಳಿಕೆ ತೋರಿದ್ದರು. ಅದರ ಮರುಕ್ಷಣವೇ ಪಕ್ಕಕ್ಕೆ ತಿರುಗಿ ಕಣ್ಣು ಮಿಟುಕಿಸಿ ‘ರಾಜಕೀಯ ಅನಕ್ಷರತೆ’ಯನ್ನು ಎತ್ತಿ ತೋರಿಸಿದರು. ದೇಶದ ಕಾಂಗ್ರೆಸ್ ಅಧ್ಯಕ್ಷನೊಬ್ಬ ‘ಅನನುಭವಿ’, ‘ಸಮಯ ಜ್ಞಾನ ಅರಿಯದವ’, ಅಪಕ್ವವಾದ ‘ಬುದ್ಧಿಯುಳ್ಳವನು’ ಎಂಬ ಬಿರುದು ಬಾವಲಿಗೆ ಭಾಜನರಾಗಿಬಿಟ್ಟ. ಇದರಿಂದಾಗಿಯೇ ದೇಶವನ್ನು ಕಾಡುತ್ತಿದ್ದ ಜ್ವಲಂತ ಸಮಸ್ಯೆಗಳನ್ನು ರಾಹುಲ್ ಗಾಂಧಿ ಚರ್ಚಿಸಿದರೂ, ಜನ ನಂಬಲಿಲ್ಲ. ಅನುಮಾನದಿಂದ ಕಂಡರು. ಬಹುಶಃ ಇಂತಹದ್ದೊಂದು ಸೋಲಾಗಬಹುದೆಂಬುದನ್ನು ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಎದ್ದ ‘ಮೋದಿ’ ಘೋಷವಾಕ್ಯದಂದಿಲೇ ಅರ್ಥಮಾಡಿಕೊಳ್ಳಬೇಕಿತ್ತು. ಚುನಾವಣೆ ಸಮಯದಲ್ಲಿ ರಾಹುಲ್ ಗಾಂಧಿ ಮತದಾರನ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದನ್ನು ಅರಿತೇ ಪ್ರಿಯಾಂಕಳನ್ನು ಕರೆತರಲಾಗಿತ್ತು. ಆದರೂ ಫಲಿತಾಂಶದ ಬದಲಾಗಲಿಲ್ಲ.
ಜಾತ್ಯತೀತ ತತ್ವ, ದ್ರಾವಿಡ ಚಳುವಳಿಯನ್ನು ಇಂದಿಗೂ ಕಾಪಿಟ್ಟುಕೊಂಡಿರುವ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಕೇವಲ 27 ಸ್ಥಾನಗಳಲ್ಲಿ ಗೆದ್ದಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಒಂದೊಂದು ಸ್ಥಾನವನ್ನು ಗಳಿಸಿದೆ. ಒಟ್ಟಾರೆ ಮತಗಳಿಕೆಯಲ್ಲಿ ಶೇಕಡ19.3ರಿಂದ 19.6ರಷ್ಟು ಹೆಚ್ಚಿಸಿಕೊಂಡಿದೆ. ಅಂದರೆ 10.69 ಕೋಟಿಯಷ್ಟು ಮತವನ್ನು 2014 ರಲ್ಲಿ ಗಳಿಸಿತ್ತು. 2019ರಲ್ಲಿ 1.17ಕೋಟಿಯಷ್ಟು ಹೆಚ್ಚಿನ ಮತವನ್ನು ಕಾಂಗ್ರೆಸ್ ಗಳಿಸಿದೆ. ಇದರಿಂದಾಗಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸ ಅಡಗಿದೆ. ನಿರುತ್ಸಾಹದಿಂದ ಕುಗ್ಗಿಹೋಗಿದ್ದಾರೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಂತಹ ಬಲಿಷ್ಠ ನಾಯಕನಿದ್ದರೂ, ರಾಹುಲ್ ಗಾಂಧಿಯವರ ಪ್ರಭಾವದಿಂದಾಗಿ ಅತ್ಯಂತ ಹೀನಾಯವಾಗಿ ಕಾಂಗ್ರೆಸ್ ಹಿನ್ನೆಡೆ ಕಂಡಿದೆ. ಪಂಜಾಬ್, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದರೆ ಅದಕ್ಕೆ ರಾಹುಲ್ ಗಾಂಧಿ ಕಾರಣರಲ್ಲ. ಕೇರಳದಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಗಳಿಸಲು ಯುಡಿಎಫ್ ಕಾರಣವಾಗಿದೆ. ಆಡಳಿತ ವಿರೋಧಿ ಅಲೆ ಎದ್ದಿದ್ದರಿಂದ, ಅಲ್ಲಿ ಎಡ ರಂಗ ಸೋತು ಕಾಂಗ್ರೆಸ್ 15 ಸ್ಥಾನ ಗಳಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಆಶ್ರಯದಿಂದ 7 ಸ್ಥಾನ ಬಾಚಿಕೊಂಡಿದೆ. ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಂದಾಗಿ 13 ಸ್ಥಾನ ಗಳಿಸಿದೆ.
ಇಂತಹದ್ದೊಂದು ಜನಾದೇಶ ಭಾಜಪ ಗಳಿಸಲು “ರಾಷ್ಟ್ರೀಯವಾದ” ಕೂಡ ಒಂದು ಪ್ರಮುಖ ಅಂಶ ಎನ್ನುವುದನ್ನು ರಾಜಕೀಯ ತಜ್ಞರು ಕೂಡ ಒಪ್ಪಿಕೊಂಡಿದ್ದಾರೆ. ಹಾಗಾದರೆ “ರಾಷ್ಟ್ರೀಯವಾದ” ಎಂಬುದು ಒಂದು ಗುಂಪಿನ ನಾಣ್ಯವಾಗಲು ಕಾರಣವೇನು? ಎಂಬ ಪ್ರಶ್ನೆ ಕಾಡತೊಡಗಿತು. ದಶಕಗಳ ಹಿಂದಿನ ಘಟನಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾನು ಬಹುವಾಗಿ ಮೆಚ್ಚುವ ಮಾಜಿ ಪ್ರಧಾನಿ ವಿಪಿ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಕಂಡುಬರುತ್ತಾರೆ. ಹೌದು. ಅಂದು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮಂಡಲ್ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತಂದಾಗ ದೇಶದ ತುಂಬಾ ಚಳುವಳಿಗಳು ನಡೆದವು. ಹೀಗೆ ನಡೆದ ಚಳುವಳಿಗಳಲ್ಲಿ ನಮ್ಮವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರೆಂಬುದು ಕೂಡ ಕಟು ಸತ್ಯ. ಇದರ ನಡುವೆಯೂ ದೊಡ್ಡ ಸಂಖ್ಯೆಯಲ್ಲಿ ವಿಪಿ ಸಿಂಗ್ ಅವರಿಗೆ ಬೆಂಬಲ ದೊರಕುತ್ತಿದ್ದಂತೆ, ಧರ್ಮದ ಆಧರಿತ ಶಕ್ತಿ ಎಚ್ಚರಗೊಂಡಿತು. ಹಿಂದುಳಿದ ವರ್ಗಗಳನ್ನು ಒಡೆದು ಆಳಲೆಂದೇ “ರಾಮಜನ್ಮಭೂಮಿ” ಹೆಸರಲ್ಲಿ ಹಿಂದುತ್ವದ ಅಲೆಯನ್ನು ಎಬ್ಬಿಸಲಾಯಿತು. ನಾಲ್ಕು ಗೋಡೆಯ ಮಧ್ಯೆ ಇದ್ದ ರಾಮ ಹೊರಬಂದ. ಯಥಾ ಪ್ರಕಾರ ಹಿಂದುಳಿದವರೆಲ್ಲರೂ ‘ರಾಮನಾಮ’ ಜಪಿಸಲು ಮುಂದಾಗಿಬಿಟ್ಟರು. ಇಂತಹವರಲ್ಲಿ ಕಿಚ್ಚು ಹೊತ್ತಿಸಲೆಂದೇ ಭಾಜಪ ಹಿರಿ ತಲೆ ಅಡ್ವಾಣಿ ‘ರಥ ಯಾತ್ರೆ’ ಶುರುವಿಟ್ಟುಕೊಂಡರು. ‘ರಥ ಯಾತ್ರೆ’ ಮಂಡಲ್ ಆಯೋಗದಿಂದ ಸಿಕ್ಕ ‘ಮೀಸಲಾತಿ’ ಎಂಬ ಬ್ರಹ್ಮಾಸ್ತ್ರವನ್ನು ನುಂಗಿ, ಮುಸುಕಾಗಿಸಿತು. ಇದೇ ಸಂದರ್ಭದಲ್ಲಿ ಬಿಹಾರಕ್ಕೆ ಕಾಲಿಟ್ಟ ಅಡ್ವಾಣಿಯ ‘ರಥಯಾತ್ರೆ’ ಯನ್ನು ಲಾಲುಪ್ರಸಾದ್ ಯಾದವ್ ನಿರ್ಭಂಧಿಸಿ ಅಡ್ವಾಣಿಯನ್ನು ಬಂಧನಕ್ಕೊಳಪಡಿಸಿದರು. ಮೀಸಲಾತಿ ಕೊಟ್ಟ ವಿ.ಪಿ. ಸಿಂಗ್ ರನ್ನು, ಧರ್ಮದ ಆಧಾರಿತ ರಾಜಕಾರಣವನ್ನು ನಿರ್ಭಂಧಿಸಲು ಪ್ರಯತ್ನಿಸಿದ ಲಾಲು ಪ್ರಸಾದ್ ಯಾದವ್ ರನ್ನು ನೆನೆಯಬೇಕಾದ ಹಿಂದುಳಿದವರು ‘ನಿಂದಿಸಲು’ ಮುಂದಾದರು. ಹೀಗೆ ಎದ್ದ ‘ಧರ್ಮದ ಶಕ್ತಿ’ ಮುಂದೆ ‘ದೇಶಭಕ್ತಿ’ ಆಯಿತು. ‘ಧರ್ಮದಶಕ್ತಿ’ಯಿಂದ ವಾಜಪೇಯಿ ಪ್ರಧಾನಿಯಾದರು. ‘ದೇಶಭಕ್ತಿ’ಯಿಂದ ಮೋದಿ ಎರಡನೇ ಸಲವೂ ಪ್ರಧಾನಿಯಾಗಿದ್ದಾರೆ.
ಮೋದಿ ಪ್ರಧಾನಿಯಾದ ನಂತರ ಹೇಳಿಕೊಳ್ಳುವಂತಹ ಆರ್ಥಿಕ ಸಾಧನೆಯೂ ಆಗಿಲ್ಲ. ನಿರುದ್ಯೋಗದ ಸಮಸ್ಯೆಯೂ ಬಗೆಹರಿದಿಲ್ಲ. ಹಸಿವಿನ ಸಾವು ನಿಂತಿಲ್ಲ. ಆದರೂ, ಮತ್ತೆ ಮೋದಿ ಪ್ರಧಾನಿ ಪಟ್ಟಕ್ಕೇರಿದ್ದಾರೆ. ಸಂವಿಧಾನವನ್ನೇ ಬದಲಾಯಿಸುತ್ತೇನೆಂದ ಅನಂತ್ ಕುಮಾರ್ ಹೆಗಡೆ ಅತ್ಯಧಿಕ ಅಂತರದಿಂದ ಗೆದ್ದಿದ್ದಾರೆ. ಅಂಬೇಡ್ಕರ್ ಅವರನ್ನು ದ್ವೇಷಿಸುವವರು ಗೆದ್ದು ಪಾರ್ಲಿಮೆಂಟಿಗೆ ಹೋಗಿದ್ದಾರೆ. ಇದಕ್ಕೆ ‘ರಾಷ್ಟ್ರೀಯವಾದ’ ಒಂದೇ ಅಲ್ಲ, 99 ರ ದಶಕದಲ್ಲಿ ಎದ್ದ “ಗರ್ವದಿಂದ ಘರ್ಜಿಸು ನಾನು ಹಿಂದೂ” ಎಂಬ ಉದ್ಘೋಷ ಕೂಡ ಕಾರಣವಾಗಿದೆ. ಕಳೆದ ಮೂರು ದಶಕಗಳಲ್ಲಿ ಈ ಉದ್ಘೋಷ ಹಲವರ ಮನದಲ್ಲಿ ಕಿಚ್ಚು ಹೊತ್ತಿಸಿದೆ. ಇದಕ್ಕೆ ಪರ್ಯಾಯವಾಗಿ ‘ಅಹಿಂದ’ ವರ್ಗಗಳಲ್ಲಿ ಇಂತಹದ್ದೊಂದು ಉದ್ಘೋಷವನ್ನು ಕಟ್ಟಿಕೊಡಲು ಜಾತ್ಯತೀತ ನಾಯಕರಿಂದ ಆಗಿರುವುದೇ ಇಲ್ಲ.800 ವರ್ಷಗಳ ಮುಸ್ಲಿಂ ದೊರೆಗಳ ಆಡಳಿತ, 200 ವರ್ಷಗಳ ‘ಬಿಳಿಯರ’ ಆಡಳಿತ ನೆನೆದು ನೋವುಣ್ಣುತ್ತಿದ್ದ ಜನ ಮೋದಿಯಲ್ಲೊಬ್ಬ ನಾಯಕನನ್ನು ಕಂಡುಕೊಂಡಿದ್ದಾರೆ.firstsuddi
ಇದಲ್ಲದೆ, ಮಾಧ್ಯಮ ಸಂಸ್ಥೆಗಳು ಕೂಡ ಬಂಡವಾಳಶಾಹಿಗಳ ಪಾಲಾಗಿ ಬಿಟ್ಟಿದ್ದವು. ಹೀಗಾಗಿ ಮಾಧ್ಯಮ ತನ್ನ ‘ಹೊಣೆಗಾರಿಕೆ’, ‘ನೈತಿಕತೆ’ ಮರೆತು ಮೋದಿಯನ್ನು ಅವತಾರ ಪುರುಷನಂತೆ ಬಿಂಬಿಸಿಬಿಟ್ಟವು. ಇದರಿಂದಾಗಿ ದೇವರನ್ನು ಪೂಜಿಸುವಂತೆ, ಮೋದಿಯ ‘ವ್ಯಕ್ತಿತ್ವದ ಪೂಜೆ’ ನಡೆಯಿತು. ‘ಗೌರವ’ದ ಜಾಗವನ್ನು ‘ಆರಾಧನೆ’ ಆಕ್ರಮಿಸಿಕೊಂಡುಬಿಟ್ಟಿತ್ತು. ನೀವುಗಳು ನೀಡುವ ಒಂದೊಂದು ಮತವು ಮೋದಿ ಖಾತೆಗೆ ಬೀಳುತ್ತದೆ ಎಂದು ಮಾಧ್ಯಮ ಪ್ರಚಾರ ನೀಡಿದವು. ಇದನ್ನು ವೀಕ್ಷಿಸಿದ, ವೀಕ್ಷಕರೆಲ್ಲರೂ, ಟಿವಿ ವಾಹಿನಿಯನ್ನೇ ‘ಯಾಗ’ ನಡೆಸುವ ವೇದಿಕೆಯೆಂಬಂತೆ ಭಕ್ತಿ ಪರವಶದಿಂದ ಕಾಣಲಾರಂಭಿಸಿದರು. ಟಿವಿ ವಾಹಿನಿಯಲ್ಲಿ ಬಿತ್ತರಗೊಳ್ಳುವುದೆಲ್ಲವನ್ನೂ ‘ಸತ್ಯ’ ಎಂದೇ ಜನ ನಂಬಿದರು. ಇದೇ ಕಾಲಕ್ಕೆ ಸಂಭವಿಸಿದ ಪುಲ್ವಾಮಾ ದಾಳಿ ಜನರನ್ನು ‘ದೇಶ ಭಕ್ತಿ’ಯ ಪರಕಾಷ್ಠೆಯಲ್ಲಿ ತೇಲಿಸಿಬಿಟ್ಟಿತು. ರಾಹುಲ್ ರನ್ನು ಜನ ಆಮೆಯಂತೆ ಕಂಡರು. ಮೋದಿಯನ್ನು ಚಿರತೆಯಂತೆ ಕಂಡರು. ಚಿರತೆ ಓಡಿ ಗುರಿ ತಲುಪಿದೆ. ಆಮೆ ನಿಧಾನವಾಗಿ ಸಾಗುತ್ತಿದೆ. ತಲುಪುವ ಗುರಿ ಇನ್ನೂ ಸಾಕಷ್ಟು ದೂರ ಇದೆ.
ಈ ಚುನಾವಣೆ ವಂಶಾಡಳಿತಕ್ಕೂ ಬ್ರೇಕ್ ಹಾಕಿದೆ. ಮುಖ್ಯಮಂತ್ರಿ ಮಗ ನಿಖಿಲ್, ತಂದೆ ದೇವೇಗೌಡ ಸೋತಿದ್ದಾರೆ. ಆದರೆ, ಯಡಿಯೂರಪ್ಪನ ಮಗ ಬಿ.ವೈ.ರಾಘವೇಂದ್ರ, ಎಚ್.ಡಿ.ರೇವಣ್ಣ ಅವರ ಮಗ ಪ್ರಜ್ವಲ್, ಜಗದೀಶ್ ಶೆಟ್ಟರ್ ನೆಂಟ ಸುರೇಶ್ ಅಂಗಡಿ ಗೆದ್ದಿದ್ದಾರೆ. ಅಶೋಕ್ ಗೆಹ್ಲೋಟ್ ಮಗ, ಮಾಧವರಾವ್ ಸಿಂಧ್ಯಾ ಮಗ, ತರುಣ್ ಗೋಗಯಿ ಮಗ, ಅಜಿತ್ ಪವರ್ ಮಗ, ಮುರುಳಿ ದೇವೂರ್ ಮಗ ಕೂಡ ಸೋತಿದ್ದಾರೆ. ಇಷ್ಟೇ ಏಕೆ?, ರಾಜೀವ್ ಗಾಂಧಿ ಮಗ ರಾಹುಲ್ ಕೂಡ ಅಮೇಥಿಯಲ್ಲಿ ಸೋತಿದ್ದಾರೆ.
ಒಟ್ಟಾರೆ ದೇಶದ ತುಂಬಾ ಭಾಜಪದ ಚುನಾವಣಾ ತಂತ್ರ ಫಲಿಸಿದೆ ಎನಿಸಬಹುದು. ಖಂಡಿತವಾಗಿಯೂ ಇಲ್ಲ.ದಕ್ಷಿಣ ಭಾರತದಲ್ಲಿ ಫಲಿಸಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಅಡ್ಡಲಾಗಿದ್ದು ‘ಅಹಿಂದ’ ಹೊರತು, ಯಾವುದೇ ಐಡಿಯಾಲಜಿಗಳು ಅಲ್ಲ.