ಕಾಫಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೆಜಿಎಫ್ ಪದಾಧಿಕಾರಿಗಳ ನಿಯೋಗ ಕೇಂದ್ರ ವಾಣಿಜ್ಯ ಸಚಿವ ಪಿಯೋಶ್ ಗೋಯಲ್ ಬೇಟಿ…

1622

ಚಿಕ್ಕಮಗಳೂರು :ಅತಿವೃಷ್ಟಿ, ಆನಾವೃಷ್ಟಿ, ಬೆಲೆಕುಸಿತ, ಬೆಳೆಕುಂಠಿತ,ಕಾರ್ಮಿಕರ ಕೊರತೆ ಸೇರಿದಂತೆ ಆನೇಕ ಸಮಸ್ಯೆಗಳಿಂದ ಜರ್ಝರಿತರಾಗಿರುವ ಕಾಫಿ ಬೆಳೆಗಾರರ ನೆರವಿಗೆ ಧಾವಿಸುವಂತೆ ಕೆಜಿಎಫ್ ಪದಾಧಿಕಾರಿಗಳ ನಿಯೋಗ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಸಂಸದರಾದ ಶೋಭಕರಂದ್ಲಾಜೆ, ಪ್ರತಾಪ್ ಸಿಂಹ ,ಪ್ರಜ್ವಲ್ ರೇವಣ್ಣ, ಪಿ.ಸಿಮೋಹನ್ ಕೇಂದ್ರ ಸಚಿವ ಸದಾನಂದಗೌಡ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೆಗೌಡ ಅವರೊಂದಿಗೆ ಬುದವಾರ ದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೋಶ್ ಗೋಯಲ್ ಅವರನ್ನು ಬೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕಳೆದ ವರ್ಷದ ಸುರಿದ ಮುಂಗಾರು ಮಳೆಯಿಂದಾಗಿ ಕಾಫಿ ಬೆಳೆಗಾರರು ಬೆಳೆ ಮತ್ತು ಭೂಮಿ ನಷ್ಟವನ್ನು ಎದುರಿಸುತ್ತಿದ್ದಾರೆ.ನಂತರದ ಬರಗಾಲದಿಂದಾಗಿ ಮುಂದಿನ ದಿನಗಳಲ್ಲಿ ಬೆಳೆ ನಷ್ಟ ಅನುಭವಿಸುವಂತಾಗಿದೆ. 26 ವರ್ಷದ ಹಿಂದಿನ ಬೆಲೆ ಇಂದಿನ ಕಾಫಿ ಬೆಳೆಗೆ ದೊರೆಯುತ್ತಿದೆ.ಇದರಿಂದಾಗಿ ಸಾಲಸೋಲ ಮಾಡಿ ತೋಟಕ್ಕೆ ಹಾಕಿದ ಹಣದಲ್ಲಿ ಅರ್ಧದಷ್ಟೂ ಸಹ ಬೆಳೆಗಾರರಿಗೆ ದೊರಕುತ್ತಿಲ್ಲ ಇದರಿಂದಾಗಿ ಸಾಲ ತೀರಿಸಲಾಗದೆ ತೋಟಗಳನ್ನು ನಿರ್ವಹಣೆ ಮಾಡಲಾಗದೆ ಬೆಳೆಗಾರರು ಪರದಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ತೋಟಗಳಿಗೆ ಹಾಕಿದ ಬಂಡವಾಳ ಕೈಗೆ ಬಾರದೆ ಬೆಳೆಗಾರರು ತತ್ತರಿಸಿದ್ದರೆ ಬ್ಯಾಂಕುಗಳು ಸಾಲ ತೀರಿಸುವಂತೆ ಒತ್ತಡ ತರುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಲಕ್ಷಾಂತರ ಕಾರ್ಮಿಕರಿಗೆ ಬದುಕು ನೀಡಿರುವ ಕಾಫಿ ಉದ್ಯಮ ಅವಸಾನಗೊಳ್ಳುತ್ತದೆ ಎಂದ ಪದಾಧಿಕಾರಿಗಳು ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಬೆಳೆಗಾರರ ಕೈಹಿಡಿಯಬೇಕು ಈ ವರ್ಷದ ಜೂನ್ 30ರವರೆಗೆ ಸೇರಿದಂತೆ ಎಲ್ಲ ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು ಶೇ 6ರ ಧರದಲ್ಲಿ 7 ವರ್ಷ ಅವಧಿಗೆ ಬೆಳೆಗಾರರ ಎಲ್ಲ ಸಾಲಗಳ ಮರುಹೊಂದಾಣಿಕೆ ಮಾಡಬೇಕು, ವಾರ್ಷಿಕ 3ರ ಬಡ್ಡಿ ದರದಲ್ಲಿ ಹೊಸ ಸಾಲ ನೀಡಬೇಕು ಕಾಫಿ ಮಂಡಳಿಯ ಶಿಫಾರಸ್ಸಿನಂತೆ ಭೂಕುಸಿತವಾಗಿರುವ ತೋಟಗಳ ಮಾಲೀಕರಿಗೆ ಪ್ರತಿ ಎಕರೆಗೆ 18 ಲಕ್ಷ ರೂ ಪರಿಹಾರ ನೀಡಬೇಕು ಎಂದು ಅಗ್ರಹಿಸಿದರು.
ಕೆಜಿಎಫ್ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್, ಉಪಾಧ್ಯಕ್ಷರಾದ ಡಿ.ಎಂ.ವಿಜಯ್, ನಂದಬೆಳ್ಳಿಯಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಮುರುಳಿಧರ್, ಸಂಘಟನಾಕಾರ್ಯದರ್ಶಿ ಕೆ.ಕೆ.ವಿಶ್ವನಾಥ್ ಹಾಜರಿದ್ದರು..