ಕಾರ್ಕಳದ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆ ಹೆಸರು ; ಪೊಲೀಸರಿಂದ ನಾಮಫಲಕ ತೆರವು…

96
firstsuddi

ಉಡುಪಿ : ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸ್ಥಳೀಯ ಯುವ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಬೆಳಗ್ಗೆ ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪಂಚಾಯತ್ ಅಧಿಕಾರಿಗಳು ಹಾಗೂ ಕಾರ್ಕಳ ಪೊಲೀಸರು ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಬೋಳ ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿಯೇ ವಿವಾದಾಸ್ಪದ ಬೋರ್ಡ್ ತೆರವುಗೊಳಿಸಲಾಗಿದೆ. ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕ ತೆರವುಗೊಳಿಸದಿದ್ರೆ ಕಾರ್ಕಳ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ರು. ಫೋಟೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಿಳಿದು ಬೋರ್ಡ್ ತೆರವುಗೊಳಿಸಿದ್ದಾರೆ.

ಈ ಕುರಿತು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೊಗೀಶ್ ಇನ್ನಾ ಮಾತನಾಡಿ, ಬೋಳ ಪಿಡಿಒ ಅವರ ಗಮನಕ್ಕೆ ತಂದ ಕೂಡಲೇ ಪಿಡಿಒ ಅವರು ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿ ಸೂಚನಾ ಫಲಕ ತೆಗೆಯಲು ಕ್ರಮಕೈಗೊಂಡರು ಎಂದರು.