ಪ್ರವಾದಿ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ – ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅಮಾನತು…

53
firstsuddi

ನವದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದ ಸದಸ್ಯತ್ವದಿಂದ ಬಿಜೆಪಿ ಅಮಾನತುಗೊಳಿಸಿದೆ. ಸೂಕ್ಷ್ಮ ವಿಷಯಗಳಲ್ಲಿ ಅಧಿಕೃತ ಮಾರ್ಗವನ್ನು ಅನುಸರಿಸದಿದ್ದಕ್ಕಾಗಿ ಮತ್ತೊಬ್ಬ ನಾಯಕ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಿದೆ.

ನೂಪುರ್ ಶರ್ಮಾ ಹೇಳಿಕೆ ವೈರಲ್ ಆಗುತ್ತಿದ್ದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದವು. ಬಳಿಕ ಇದು ಅಂತರಾಷ್ಟ್ರೀಯ ಸುದ್ದಿಯಾಗಿ ಹೊರಹೊಮ್ಮಿತು. ಇರಾನ್, ಕತಾರ್ ಮತ್ತು ಕುವೈತ್ ನಂತಹ ಇಸ್ಲಾಮಿಕ್ ರಾಷ್ಟ್ರಗಳು ಶರ್ಮಾ ಮಾಡಿದ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಭಾರತೀಯ ರಾಯಭಾರಿಗಳಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು.

 ನೂಪುರ್ ಶರ್ಮಾ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು. ಅಲ್ಲದೇ, ಬಿಜೆಪಿ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮದ ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಇದರ ಬೆನ್ನಲ್ಲೇ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ರನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿದೆ.