ಚಿಕ್ಕಮಗಳೂರು : ಸಭೆ ಸಮಾರಂಭಗಳು ಮತ್ತು ಕಾರ್ಯಕ್ರಮಗಳಲ್ಲಿ ಉದ್ಘಾಟನೆ ವೇಳೆ ಕನ್ನಡದ ಗೀತೆಗಳನ್ನೇ ಹಾಡುವಂತೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಲಹೆ ನೀಡಿದರು.
ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ನಾಡುನುಡಿಯ ಬಗ್ಗೆ, ದೀಪದ ಬಗ್ಗೆ, ಪು.ತಿ.ನ ಬಿಎಂಶ್ರೀ, ಕರ್ಕಿ, ಕೆ.ಎಸ್.ನರಸಿಂಹಸ್ವಾಮಿ, ಸೇರಿದಂತೆ ನಾಡಿನ ಅನೇಕ ಹಿರಿಯ ಕವಿಗಳು, ಸಾಹಿತಿಗಳು ಗೀತೆಗಳನ್ನು ರಚಿಸಿದ್ದಾರೆ ಎಂದರು.
ಕಾರ್ಯಕ್ರಮಗಳಲ್ಲಿ ದೀಪ ಬೆಳಗುವ ವೇಳೆ ಆ ಗೀತೆಗಳನ್ನು ಹಾಡುವುದರಿಂದ ಸಭೆಯಲ್ಲಿ ಸಂಚಲನವಾಗುವುದರ ಜೊತೆಗೆ ನಾಡು ನುಡಿಯ ಬಗ್ಗೆ ನಮ್ಮ ನೈಜವಾದ ಕಾಳಜಿ ಬಿಂಬಿತವಾಗುತ್ತದೆ ಎಂದು ಹೇಳಿದರು.
ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ದೀಪವು ನಿನ್ನದೆ, ಗಾಳಿಯು ನಿನ್ನದೆ ಆರದಿರಲಿ ಬದುಕು ಎಂಬ ಗೀತೆಯನ್ನು ಬಹಳ ಅರ್ಥಗರ್ಭಿತವಾಗಿ ಮತ್ತು ಸೊಗಸಾಗಿ ಬರೆದಿದ್ದಾರೆ, ಆ ಹಾಡನ್ನು ಸಭೆ ಸಮಾರಂಭಗಳಲ್ಲಿ ದೀಪ ಬೆಳಗಿಸುವ ವೇಳೆ ಹಾಡಿದರೆ ನಿಜವಾಗಿಯೂ ಅರ್ಥಪೂರ್ಣವಾಗಿರುತ್ತದೆ ಎಂದು ತಿಳಿಸಿದರು.
ಕನ್ನಡವನ್ನು ಉಳಿಸಬೇಕೆಂದು ಬರೀ ಬಾಯಲ್ಲಿ ಹೇಳಿದರೆ ಅದು ಉಳಿಯುವುದಿಲ್ಲ, ಕನ್ನಡ ಉಳಿಯಬೇಕಾದರೆ ಕನ್ನಡದಲ್ಲೇ ಓದುವುದು, ಬರೆಯುವುದು, ಹಾಡುವುದು ಮತ್ತು ಮಾತನಾಡುವುದನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟಾನಾಯ್ಕ ವಿದ್ಯಾರ್ಥಿಗಳು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡುವ ಮೂಲಕ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತರಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಜಿ.ಬಿ.ವಿರೂಪಾಕ್ಷ ಜಿಲ್ಲೆಯಲ್ಲೇ ಅತಿಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ಕಾಲೇಜು ಪ್ರತಿವರ್ಷ ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದು, ವಿದ್ಯಾರ್ಥಿಗಳು ಅದನ್ನು ಮುಂದುವರೆಸಬೇಕು ಎಂದು ಮನವಿ ಮಾಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಉಪನ್ಯಾಸಕ ರುದ್ರಪ್ಪಶಾಸ್ತ್ರಿ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು, ಕಾಲೇಜು ಅಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಕೆ.ವೆಂಕಟೇಶ ಪೈ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಕೆ.ಆರ್.ಜಯರಾಮ್, ಅರುಂಧತಿ, ಖುಬ್ರಾಖಾನ್, ಸಿ.ಬಿ.ಲಲಿತ್‍ಕುಮಾರ್, ಉಪನ್ಯಾಸಕರಾದ ಮೀನಾಕ್ಷಿ, ಸುಧಾ, ಲೋಕೇಶ್ ಉಪಸ್ಥಿತರಿದ್ದರು.










